
ಪುಂಡಾಟ ಮೆರೆದಿದ್ದ ಎಂಇಎಸ್ ಮುಖಂಡರ ಬಂಧನ

ಬೆಳಗಾವಿ : ಭಾಷಾ ವಿಷಯದಲ್ಲಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಬೆಳಗಾವಿಯಲ್ಲಿ ಅನವಶ್ಯಕ ವಿಷಯಕ್ಕೆ ಪುಂಡಾಟ ಮೆರೆದು ರಾಜಕೀಯ ಲಾಭಕ್ಕೆ ಯತ್ನಿಸುತ್ತಿದ್ದ ಎಂಇಎಸ್ ಮುಖಂಡ ಶುಭಂ ಶಳಕೆಯನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಕಳೆದ ವಾರ ಜೈ ಕರ್ನಾಟಕ ಎಂದು ಘೋಷಣೆ ಕೂಗಿದ್ದ ಉದ್ಯಮಿ ಮೇಲೆ ಹಲ್ಲೆಗೆ ಯತ್ನಿಸಿದ್ದಲ್ಲದೆ ಅವರ ಕಚೇರಿ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆಯುವ ಮೂಲಕ ಎಂಇಎಸ್ ಮುಖಂಡ ಶುಭಂ ಶಳಕೆ ಪುಂಡಾಟ ಮೆರೆದಿದ್ದರು. ಚುನಾವಣೆ ಸಂದರ್ಭವನ್ನೇ ಗುರಿಯಾಗಿಸಿಕೊಂಡು ರಾಜಕೀಯ ಲಾಭ ಪಡೆಯುವ ಎಂಇಎಸ್ ಗೆ ಈ ಸಲ ನಗರ ಪೊಲೀಸರು ಸರಿಯಾದ ಪಾಠ ಕಲಿಸಿದ್ದಾರೆ.
ಬೆಳಗಾವಿ ನಗರದಲ್ಲಿ ನಡೆದ ಕುಸ್ತಿ ಪಂದ್ಯಾವಳಿ ಒಂದರಲ್ಲಿ ಓರ್ವ ಕುಸ್ತಿಪಟು ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗುವ ಮೂಲಕ ಗೊಂದಲ ಸೃಷ್ಟಿಸಲು ಯತ್ನಿಸಿದ್ದ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಉದ್ಯಮಿ ಶ್ರೀಕಾಂತ ದೇಸಾಯಿ ಕುಸ್ತಿ ಪಟುವಿಗೆ ಮಹಾರಾಷ್ಟ್ರ ಘೋಷಣೆ ಕೂಗದಂತೆ ಬುದ್ದಿ ಹೇಳಿದ್ದರು.
ಇದಕ್ಕೆ ಕೋಪಗೊಂಡ ಎಂಇಎಸ್ ಪುಂಡರು ಉದ್ಯಮಿ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಅಷ್ಟೇ ಅಲ್ಲದೆ ಜೈ ಮಹಾರಾಷ್ಟ್ರ ಎಂದು ಗೋಡೆ ಬರಹ ಬರೆದಿದ್ದಲ್ಲದೆ ಜನರಲ್ಲಿ ಭಾಷಾ ವೈಷಮ್ಯ ಮೂಡುವ ನಿಟ್ಟಿನಲ್ಲಿ ವೀಡಿಯೊ ಹರಿಬಿಟ್ಟು ಪುಂಡಾಟ ಮೆರೆದುದ್ದರು. ನಗರದ ಮಾಳಮಾರುತಿ ಪೊಲೀಸ್ ಠಾಣೆ ಸಿಪಿಐ ನಾಡದ್ರೋಹಿ ಎಂಇಎಸ್ ಮುಖಂಡನ್ನು ಬಂಧಿಸಿದ್ದಾರೆ. ಇದರಿಂದ ನಗರದಲ್ಲಿ ಅನವಶ್ಯಕ ಕಿರಿಕ್ ನಡೆಸುತ್ತಿದ್ದ ಎಂಇಎಸ್ ಗೆ ಸರಿಯಾದ ಪಾಠ ಕಲಿಸಿದಂತಾಗುತ್ತದೆ ಎಂಬುದು ಕನ್ನಡಿಗರ ಆಶಯ.