ವಯೋವೃದ್ಧ ಮಾವನ ಮೇಲೆ ಸೊಸೆ ಹಲ್ಲೆ ; ವೀಡಿಯೋ ವೈರಲ್
ಮಂಗಳೂರು : ವಯೋವೃದ್ಧ ಮಾವನಿಗೆ ಸೊಸೆ ಅಮಾನವೀಯವಾಗಿ ಥಳಿಸಿರುವ ರಾಕ್ಷಸೀ ಕೃತ್ಯ ಮಂಗಳೂರಿನ ಕುಲಶೇಖರದಲ್ಲಿ ಬೆಳಕಿಗೆ ಬಂದಿದೆ. ಇದೀಗ ಆರೋಪಿ ಸೊಸೆಯನ್ನು ಬಂಧಿಸಲಾಗಿದೆ.
ಪದ್ಮನಾಭ ಸುವರ್ಣ (87) ಸೊಸೆಯಿಂದಲೇ ಥಳಿತಕ್ಕೊಳಗಾದವರು. ಉಮಾಶಂಕರಿ ಎಂಬಾಕೆಯೇ ಮಾವನಿಗೆ ಮನಸೋ ಇಚ್ಛೆ ಥಳಿಸಿದ ಸೊಸೆ.
ಮಂಗಳೂರಿನ ಅತ್ತಾವರದ ಕೆಇಬಿಯಲ್ಲಿ ಸಿಬ್ಬಂದಿಯಾಗಿರುವ ಉಮಾಶಂಕರಿ ಮಾವನಿಗೆ ವಾಕಿಂಗ್ ಸ್ಟಿಕ್ನಿಂದ ಥಳಿಸಿದ್ದಾಳೆ.
ಪದ್ಮನಾಭ ಸುವರ್ಣ ಅವರು ಹೊಡೆಯದಿರುವಂತೆ ತಡೆಯಲು ಬಂದಾಗ ಅವರನ್ನು ತಳ್ಳಿದ್ದಾಳೆ.
ಪರಿಣಾಮ ಪದ್ಮನಾಭ ಸುವರ್ಣ ಅವರು, ಸೋಫಾದ ಮೇಲೆಯೇ ಬಿದ್ದು ನೋವಿನಿಂದ ಅಳುತ್ತಿರುವ ಧ್ವನಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಉಮಾಶಂಕರಿ ಪತಿ ಪ್ರೀತಂ ಸುವರ್ಣ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಅವರು ವಿದೇಶದಲ್ಲಿದ್ದುಕೊಂಡೇ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಸೊಸೆಯ ರಾಕ್ಷಸಿ ಕೃತ್ಯ ಬೆಳಕಿಗೆ ಬಂದಿದೆ.
ಈ ಘಟನೆ ಮಾರ್ಚ್ 9ರಂದು ನಡೆದಿದ್ದು, ಇಂದು ಬೆಳಕಿಗೆ ಬಂದಿದೆ. ಸದ್ಯ ಗಾಯಾಳು ಪದ್ಮನಾಭ ಸುವರ್ಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಪತಿ ಪ್ರೀತಂ ಸುವರ್ಣರ ಸೂಚನೆಯನ್ವಯ ಪದ್ಮನಾಭ ಸುವರ್ಣರ ಪುತ್ರಿ ಪ್ರಿಯಾ ಸುವರ್ಣ ದೂರು ನೀಡಿದ್ದಾರೆ. ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.


