Select Page

ಮಲಪ್ರಭಾ ಸಕ್ಕರೆ ಕಾರ್ಖಾನೆಯಲ್ಲಿ ಭ್ರಷ್ಟಾಚಾರ ; ಮಹತ್ವದ ಸುದ್ದಿಘೋಷ್ಠಿ

ಮಲಪ್ರಭಾ ಸಕ್ಕರೆ ಕಾರ್ಖಾನೆಯಲ್ಲಿ ಭ್ರಷ್ಟಾಚಾರ ; ಮಹತ್ವದ ಸುದ್ದಿಘೋಷ್ಠಿ

ಚನ್ನಮ್ಮನ ಕಿತ್ತೂರು : ಮಲಪ್ರಭಾ ಸಕ್ಕರೆ ಕಾರ್ಖಾನೆಯ ಅವ್ಯವಹಾರದ ಬಗ್ಗೆ ತನಿಖೆ ಆಗಬೇಕು ಎಂದು ಆಡಳಿತ ಮಂಡಳಿಯ ನಿರ್ದೇಶಕರು ತೀರ್ಮಾನಿಸಿದ್ದಾರೆ. ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರ ತೀರ್ಮಾನ ತೆಗೆದುಕೊಂಡು ತನಿಖೆಗೆ ನೀಡಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕ ಮೋಹನ ಹಿರೇಮಠ ಹೇಳಿದರು.

ಭಾನುವಾರ ಇಲ್ಲಿಯ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ವ್ಯವಸ್ಥಾಪಕ ನಿರ್ದೇಶಕ ವೀರೇಶ ಹುಲಿಕಟ್ಟಿ ಅವರು ಕಾರ್ಖಾನೆಯಲ್ಲಿ ಸಾಕಷ್ಟು ಹಣವನ್ನು ಲೂಟಿ ಮಾಡಿದ್ದಾರೆಂದು ಮಾಹಿತಿ ಬಂದಿದೆ ಇದರ ಬಗ್ಗೆ ಹಿಂಬರಹ ಕೊಡಬೇಕು ಎಂದು ಸಕ್ಕರೆ ನಿರ್ದೇಶಕರು ಪತ್ರ ಬರೆದಿದ್ದಾರೆ. ತನಿಖೆ ವರದಿ ಬಂದ ಬಳಿಕ ಯಾರು ತಪ್ಪು ಮಾಡಿದ್ದಾರೆ ಎಂದು ಗೊತ್ತಾಗುತ್ತದೆ ಎಂದರು.

40 ಟನ್ ಲಾರಿಯಲ್ಲಿ 6 ಟನ್ ಸಕ್ಕರೆ ತುಂಬಿಸಿ ಸಾಗಿಸಿದ್ದಾರೆ. ಸಕ್ಕರೆ ಸಾಗಿಸಿದ ಲಾರಿಗಳ ಪಟ್ಟಿಯಲ್ಲಿ ಒಂದು ಕಾರ್ ನಂಬರ ಕೂಡ ಇದೆ. ಇದರ ಬಗ್ಗೆ ದಾಖಲಾತಿಗಳು ಸಂಗ್ರಹಿಸಲಾಗಿದೆ. ಹಿಂದಿನ ವ್ಯವಸ್ಥಾಪಕ ನಿರ್ದೇಶಕ ವೀರೇಶ ಹಾಗೂ ಗೋದಾಮು ನಿರ್ವಾಹಕ ಕಾಳಪ್ಪ ಬಡಿಗೇರ ಸೇರಿಕೊಂಡು ಸಕ್ಕರೆ ಸಾಗಿಸಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

ಕಾರ್ಖಾನೆಯ 12 ಜನ ಸಿಬ್ಬಂದಿಗಳ ಖಾತೆ ಪರಿಶೀಲನೆ ಮಾಡಲಾಯಿತು. ಕಾರ್ಖಾನೆ ಉಳಿಸುವ ಸಲುವಾಗಿ ಖಾನಾಪೂರ ಶಾಸಕ ವಿಠ್ಠಲ್ ಹಲಗೇಕರ್ ಹಾಗೂ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಅವರು ಬೆಂಬಲವಾಗಿ ನಿಂತಿದ್ದಾರೆ ಎಂದರು.

ನಿರ್ದೇಶಕ ಸಾವಂತ ಕಿರಬನವರ ಮಾತನಾಡಿ, ಹಿಂದಿನ ವ್ಯವಸ್ಥಾಪಕ ನಿರ್ದೇಶಕ ವೀರೇಶ ಹುಲಿಕಟ್ಟಿ ಅವರು ಒಳ್ಳೆಯ ಆಡಳಿತ ನಡೆಸುತ್ತಾರೆ ಎಂದು ವಿಶ್ವಾಸವಿತ್ತು. ಆದರೆ ಅವರು ಅವ್ಯವಹಾರ ಮಾಡುತ್ತಾರೆ ಎಂದು ಗೊತ್ತಿರಲಿಲ್ಲ ಎಂದು ಆಕ್ರೋಶ ಹೊರಹಾಕಿದರು.

ನಿರ್ದೇಶಕಿ ಮೀನಾಕ್ಷಿ ನೆಲಗಳಿ ಮಾತನಾಡಿ, ಹಿಂದಿನ ವ್ಯವಸ್ಥಾಪಕ ನಿರ್ದೇಶಕ ವೀರೇಶ ಹುಲಿಕಟ್ಟಿ ತಮ್ಮ ಕುಟುಂಬಸ್ಥರು ಹಾಗೂ ಕಾರ್ಖಾನೆಯ ಮಾಜಿ ಕಾರ್ಮಿಕರನ್ನು ಸೇರಿಸಿಕೊಂಡು ಬೆಳಕು ಸಹಕಾರ ಸಂಘ ಮಾಡಿದ್ದಾರೆ ಇದಕ್ಕೆ ಕಾರ್ಖಾನೆಯ ದುಡ್ಡನ್ನು ತೆಗೆದುಕೊಂಡು ಹೋಗಿ ಮತ್ತೆ ಅದೇ ಹಣವನ್ನು ಕಾರ್ಖಾನೆಗೆ ಸಾಲ ನೀಡಿದ್ದಾರೆ. ಯಾರಿಗೂ ಗೊತ್ತು ಇಲ್ಲದೆ ಸಾಲ ಮರಳಿ ತುಂಬಿದ್ದಾರೆ ಎಂದು ಆರೋಪಿಸಿದರು.

ಉಪಾಧ್ಯಕ್ಷೆ ಲಕ್ಷ್ಮಿ ಅರಳಿಕಟ್ಟಿ, ನಿರ್ದೇಶಕರಾದ ಶಂಕರಗೌಡ ಪಾಟೀಲ, ಮಂಜುನಾಥ ಪಾಟೀಲ, ಬಸವರಾಜ ಬೆಂಡಿಗೇರಿ, ಲಕ್ಷ್ಮಣ ಎಮ್ಮಿ, ಸಿದ್ದಪ್ಪ ದೂರಪ್ಪನವರ, ಬಸವರಾಜ ಪುಂಡಿ, ಭರತೇಶ ಶೇಬನ್ನವರ, ಸಂಜೀವ ಹುಬಳೆಪ್ಪನವರ, ಜ್ಯೋತಿಬಾ ಹೈಬತ್ತಿ ಇದ್ದರು.

Advertisement

Leave a reply

Your email address will not be published. Required fields are marked *

error: Content is protected !!