ಗೃಹಲಕ್ಷ್ಮೀ ಹಣ ಖಾತೆಗೆ ಬರುವುದು ಯಾವಾಗ…? ಸಚಿವೆ ಹೆಬ್ಬಾಳಕರ್ ಬಿಗ್ ಅಪ್ಡೇಟ್
ಬೆಳಗಾವಿ : ಬಾಕಿ ಉಳಿದಿರುವ ಮೂರು ತಿಂಗಳ (ಜನವರಿ, ಫೆಬ್ರವರಿ, ಮಾರ್ಚ್) ಗೃಹಲಕ್ಷ್ಮಿ ಹಣವನ್ನು ಮೇ ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಮಾಹಿತಿ ನೀಡಿದರು.
ಮೂರು ತಿಂಗಳ ಹಣ ಬಿಡುಗಡೆಗೆ ಹಣಕಾಸು ಇಲಾಖೆಯಿಂದ ಅನುಮೋದನೆ ಸಿಕ್ಕಿದ್ದು, ಒಂದು ವಾರ ಒಂದು ತಿಂಗಳ ಹಣ, ಮತ್ತೊಂದು ವಾರ ಮತ್ತೊಂದು ತಿಂಗಳ ಹಣವನ್ನು ಗೃಹಲಕ್ಷ್ಮಿಯರ ಬ್ಯಾಂಕ್ ಖಾತೆಗೆ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಹೇಳಿದರು.
ಭಾಷಣದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿ ಮೇಲೆ ಕೈ ಮಾಡಲು ಮುಂದಾದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಪೊಲೀಸ್ ಅಧಿಕಾರಿ ಮೇಲೆ ಕೈ ಮಾಡಲು ಮುಂದಾಗಿದ್ದು ಆ ಕ್ಷಣದಲ್ಲಿ ಆ ರೀತಿ ಆಗಿರಬಹುದು. ಆ ಸಂದರ್ಭದಲ್ಲಿ ಆದ ಆಕಸ್ಮಿಕ ಘಟನೆ ಇದಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಸಿದ್ದರಾಮಯ್ಯನವರು ಹಿರಿಯರು, ಅವರು ಅಧಿಕಾರಿಗಳಿಗೆ ಗೌರವ ನೀಡುವ ವಿಷಯದಲ್ಲಿ ತಮ್ಮ ಚೌಕಟ್ಟನ್ನು ಎಂದೂ ಮೀರಿದವರಲ್ಲ. ಆ ಸಂದರ್ಭದಲ್ಲಿ ಅಂಥ ಘಟನೆ ನಡೆಯಬಾರದಿತ್ತು. ಸಿದ್ದರಾಮಯ್ಯನವರಿಗೆ ಇನ್ನೊಂದು ಹೆಸರೇ ಹಿಂದುಳಿದ ವರ್ಗ, ತುಳಿತಕ್ಕೊಳಗಾದವರ ಧ್ವನಿ ಎನ್ನುತ್ತೇವೆ. ಸಿದ್ದರಾಮಯ್ಯನವರ ದೊಡ್ಡ ಗುಣವನ್ನು ಎಲ್ಲರೂ ಹಾಡಿಹೊಗಳುತ್ತಾರೆ. ಆದರೆ, ಆ ಒಂದು ಘಟನೆ ನಡೆಯಬಾರದಿತ್ತು ಎಂದರು.
ಬಿಜೆಪಿ ನಾಯಕರು ನಮ್ಮ ನಾಯಕ ರಾಹುಲ್ ಗಾಂಧಿ ಅವರಿಗೆ ಸದನದ ಒಳಗೂ ಹೊರಗೂ ಬೈದರೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೆಲೆಕೊಟ್ಟು ನಾವು ಶಾಂತಿಯಿಂದ ವರ್ತನೆ ಮಾಡುತ್ತಿದ್ದೇವೆ. ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾಷಣದ ವೇಳೆ ಬಿಜೆಪಿ ಕಾರ್ಯಕರ್ತರು ಅತಿರೇಖವಾಗಿ ವರ್ತಿಸಿದರು ಎಂದರು.


