ಬೆಳೆಸುವುದರಲ್ಲಿ ನನಗೆ ವಿಶ್ವಾಸ, ತುಳಿಯುವ ಸ್ವಭಾವ ನನ್ನದಲ್ಲ : ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ : ನಾನೂ ಬೆಳೆದು ಬೇರೆಯವರನ್ನೂ ಬೆಳೆಸುವುದರಲ್ಲಿ ನನಗೆ ವಿಶ್ವಾಸ, ನಾನು ಬೆಳೆದು ಬೇರೆಯವರನ್ನು ತುಳಿಯುವ ಸ್ವಭಾವ ನನ್ನದಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಹಿರೇಬಾಗೇವಾಡಿಯಲ್ಲಿ ಭಾನುವಾರ ಸಂಜೆ ಬಾಲ ವಿಕಾಸ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ಅಡಿವೇಶ್ ಇಟಗಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡು, ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ಬೆಳೆದು ತುಳಿಯುವವರನ್ನು ದೇವರೂ ಮೆಚ್ಚುವುದಿಲ್ಲ. ಎಲ್ಲರನ್ನೂ ಜೊತೆಯಾಗಿ ಕರೆದುಕೊಂಡು ಹೋಗವ ಸ್ವಭಾವ ನನ್ನದು. ನಿಜವಾದ ಕಾರ್ಯಕರ್ತರನ್ನು, ಮುಖಂಡರನ್ನು ಗುರುತಿಸಿ ಬೆಳೆಸುವವರೇ ನಿಜವಾದ ನಾಯಕರು ಎಂದು ಅವರು ಹೇಳಿದರು.
ಮಂತ್ರಿಯಾಗಿ ಕೆಲಸ ಮಾಡುವ ದೊಡ್ಡ ಜವಾಬ್ದಾರಿ ನನ್ನ ಗ್ರಾಮೀಣ ಕ್ಷೇತ್ರದ ಜನರಿಂದ ನನಗೆ ಬಂದಿದೆ. ಮೂರು ಇಲಾಖೆಯಿಂದಾಗಿ ರಾಜ್ಯದ ಶೇ. 70 -80 ಜನರ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದೆ. ರಾಜ್ಯದ ಮುಂಚೂಣಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹೆಸರು ಇರುವಂತೆ ಮಾಡುತ್ತೇನೆ. ನಾನು ಹೇಳಿದ್ದನ್ನು ಮಾಡುತ್ತೇನೆ, ಮಾಡುವುದನ್ನಷ್ಟೇ ಹೇಳುತ್ತೇನೆ. ಎಲ್ಲ ಜಾತಿಯವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇನೆ ಎಂದು ಅವರು ತಿಳಿಸಿದರು.
ಸಕಲ ಜೀವಿಗಳ ಕ್ಷೇಮ ಬಯಸುವವರೇ ಹಿಂದು. ನಾನು 154 ದೇವಸ್ಥಾನ, 31 ಅಂಬೇಡ್ಕರ್ ಭವನ, ಹಲವಾರು ಶಾದಿ ಮಹಲ್, ಜೈನ ಬಸದಿ, ಪ್ರಾರ್ಥನಾ ಮಂದಿರಗಳನ್ನು ಜೀರ್ಣೋದ್ಧಾರ ಮಾಡದ್ದೇನೆ. ಬೇರೆಯವರು ಬರೇ ಹಿಂದೂ ಎಂದು ಭಾಷಣ ಮಾಡುತ್ತಾರೆ. ನಾನು ಕೆಲಸ ಮಾಡುತ್ತೇನೆ. ಕೇವಲ ಭಾಷಣದಲ್ಲಿ ಹೇಳಿದರೆ ಹಿಂದು ಆಗುವುದಿಲ್ಲ. ಕಲ್ಲಿಗೂ ಪೂಜೆ ಮಾಡುವ, ಗಾಳಿಗೂ ಪೂಜೆ ಮಾಡುವ, ಬೆಂಕಿಗೂ ಪೂಜೆ ಮಾಡುವ, ಎಲ್ಲ ವಸ್ತುಗಳನ್ನು ಪೂಜೆ ಮಾಡುವ ನಾವು ಬೇರೆ ಮನುಷ್ಯರನ್ನು ದ್ವೇಷ ಮಾಡುವುದು ಎಷ್ಟು ಸರಿ? ಎಂದು ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನಿಸಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಕೇವಲ ತಾವು ಬೆಳೆದರೆ ನಾಯಕರಾಗುವುದಿಲ್ಲ. ಸಮಾಜದಲ್ಲಿರುವ ಮುಖಂಡರನ್ನು ಗುರುತಿಸಿ ಜವಾಬ್ದಾರಿ ಕೊಟ್ಟು ಬೆಳೆಸಬೇಕು. ಅಂತಹ ವಿಶಾಲ ಹೃದಯ ಲಕ್ಷ್ಮೀ ಹೆಬ್ಬಾಳಕರ್ ಅವರದ್ದು. ಎಲ್ಲ ಕೆಲಸ ಮಾಡುವ ಶಕ್ತಿಯನ್ನು ದೇವರು ಅವರಿಗೆ ಕೊಟ್ಟಿದ್ದಾನೆ. ಪ್ರಾಮಾಣಿಕ ಕೆಲಸಗಾರರಾಗಿರುವ ಅವರನ್ನು ಮುಂದಿವ ದಿನಗಳಲ್ಲೂ ಬೆಂಬಲಿಸಿ ಶಾಸಕರಾಗಿ ಉಳಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಬಡೇಕೊಳ್ಳಮಠದ ನಾಗೇಂದ್ರ ಮಹಾಸ್ವಾಮಿಗಳು, ಅರಳಿಕಟ್ಟಿಯ ಶ್ರೀ ಶಿವಮೂರ್ತಿ ಅಜ್ಜನವರು, ದರ್ಗಾ ಅಜ್ಜನವರು, ಬಡಸ್ ನ ಶ್ರೀ ಪ್ರಶಾಂತ ದೇವರು, ಜಾಲಿಕರೆಮ್ಮ ದೇವಿಯ ಆರಾಧಕರಾದ ಶ್ರೀ ಉಳವಪ್ಪ ಅಜ್ಜನವರು, ಶ್ರೀ ಕಲ್ಲಯ್ಯ ಶಾಸ್ತ್ರಿಗಳು, ಶ್ರೀ ಗಂಗಯ್ಯ ಹಿರೇಮಠ್ ಸ್ವಾಮಿಗಳು, ಹಿರೇಬಾಗೇವಾಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತ ಮುಖಂಡರು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.


