ಸವದಿ ಕೈ ತಪ್ಪುತ್ತಾ ಕಾಂಗ್ರೆಸ್ ಟಿಕೆಟ್ ; ಚರ್ಚೆ ಹುಟ್ಟು ಹಾಕಿದ ಸಾಹುಕಾರ್ ಹೇಳಿಕೆ
ಬೆಳಗಾವಿ : ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನಡುವಿನ ಸಮರ ಮುಂದುವರಿದ ಲಕ್ಷಣ ಕಂಡುಬರುತ್ತಿದೆ. ಈ ಮಧ್ಯೆ ಸಚಿವ ಸತೀಶ್ ಜಾರಕಿಹೊಳಿ ಆಡಿದ್ದ ಆ ಒಂದು ಮಾತು ಕ್ಷೇತ್ರದಲ್ಲಿ ಬಾರೀ ಚರ್ಚೆ ಹುಟ್ಟುಹಾಕಿದೆ.
ಹೌದು ಬಿಜೆಪಿ ಜೊತೆ ಮುನಿಸಿಕೊಂಡು ಅಚಾನಕ್ಕಾಗಿ ಕಾಂಗ್ರೆಸ್ ಸೇರಿದ್ದ ಲಕ್ಷ್ಮಣ ಸವದಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ತೊಡೆತಟ್ಟಿದ್ದರು. ಈ ಚುನಾವಣೆಯಲ್ಲಿ ಸವದಿ ಬರೋಬ್ಬರಿ 70 ಸಾವಿರ ಮತಗಳ ಅಂತರದಿಂದ ಗೆದ್ದು ವಿರೋಧಿಗಳಿಗೆ ನಡುಕ ಹುಟ್ಟಿಸಿದ್ದರು. ಇನ್ನೇನು ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವಸ್ಥಾನ ಲಭಿಸುತ್ತದೆ ಅನ್ನುವಷ್ಟರಲ್ಲಿ ಅವಕಾಶ ಕೈತಪ್ಪಿತ್ತು.
ಸವದಿ ಕಾಂಗ್ರೆಸ್ ಸೇರ್ಪಡೆಯಿಂದ ಅವರಿಗೆ ಎಷ್ಟು ಲಾಭ ಆಗಿದೆ ಅದು ಎರಡನೇ ಮಾತು ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಗೆ ದೊಡ್ಡ ಶಕ್ತಿ ಲಭಿಸಿದಂತಾಗಿದೆ ಎಂದು ಸ್ವತಃ ಸಿಎಂ ಹಾಗೂ ಡಿಸಿಎಂ ಹೇಳಿಕೆ ನೀಡಿದ್ದರು. ಸವದಿ ಕಾಂಗ್ರೆಸ್ ಸೇರಿ ಸುಮಾರು ಒಂದುವರೆ ವರ್ಷ ಕಳೆದರು ಇನ್ನೂ ಅವರನ್ನು ಒಪ್ಪಿಕೊಳ್ಳಲು ಕೆಲ ನಾಯಕರು ಹಿಂದೇಟು ಹಾಕುತ್ತಿದ್ದಾರಾ ಎಂಬ ಮಾತು ಜೋರಾಗಿವೆ.
ಈಗಾಗಲೇ ಅಥಣಿ ಕಾಂಗ್ರೆಸ್ ನಲ್ಲಿ ಪ್ರಶ್ನಾತೀತ ನಾಯಕ ಎಂದರೆ ಸವದಿ. ಆದರೆ ಅಥಣಿ ಕಾಂಗ್ರೆಸ್ ನಲ್ಲಿ ಮೂಲ ಮತ್ತು ವಲಸಿಗ ಎಂಬ ಸಂದಿಗ್ಧ ಸ್ಥಿತಿ ನಿರ್ಮಾಣವಾಗಿದ್ದು, ಎರಡು ಬಣಗಳು ಸೃಷ್ಟಿಯಾದಂತಿವೆ. ಈ ಮಧ್ಯೆ ಸಚಿವ ಸತೀಶ್ ಜಾರಕಿಹೊಳಿ ಮೂಲ ಕಾಂಗ್ರೆಸ್ ನ ನಾಯಕರಿಗೆ ಮುಂಬರುವ ದಿನಗಳಲ್ಲಿ ರಾಜಕೀಯ ಹುದ್ದೆ ಲಭಿಸಲಿದೆ ಎಂಬ ಹೇಳಿಕೆ ಈಗ ಮತ್ತಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಮೂಲ ಕಾಂಗ್ರೆಸ್ ನಾಯಕರಿಗೆ ರಾಜಕೀಯ ಹುದ್ದೆ ಭರವಸೆ ನೀಡಿದ್ದೆ ತಡ, ಮುಂಬರುವ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಅವರ ಕಾಂಗ್ರೆಸ್ ಟಿಕೆಟ್ ಕೈತಪ್ಪುತ್ತದೆ ಎಂಬ ಚರ್ಚೆ ಜೋರಾಗಿವೆ. ಸಾಹುಕಾರ್ ಆಡಿದ್ದ ಆ ಒಂದು ಮಾತು ಸವದಿ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿದೆ. ಒಟ್ಟಿನಲ್ಲಿ ಅಥಣಿಯಲ್ಲಿ ಮೂಲ ಹಾಗೂ ವಲಸಿಗ ಕಾಂಗ್ರೆಸ್ ಪೈಟ್ ನಡುವೆ ಚುನಾವಣಾ ಟಿಕೆಟ್ ಚರ್ಚೆ ರಂಗು ಪಡೆದಿದೆ.
ಇನ್ನೂ ಚುನಾವಣೆಗೆ ಮೂರು ವರ್ಷಕ್ಕಿಂತ ಹೆಚ್ಚಿನ ಸಮಯ ಇದೇ. ಸಧ್ಯಕ್ಕೆ ಟಿಕೆಟ್ ಗೊಂದಲ ಅಪ್ರಸ್ತುತ ಅನ್ನಿಸಿದರು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೆ ಇದು ಬಾರೀ ಹೊಡೆತ ನೀಡಲಿದೆ. ಒಬ್ಬರು ನಾಯಕ ಮಧ್ಯೆ ಉಂಟಾದ ಜಗಳದಿಂದ ಕಾಂಗ್ರೆಸ್ ಗೆ ಹಿನ್ನಡೆ ಆದರೂ ಅಚ್ಚರಿ ಪಡುವಂತಿಲ್ಲ.


