ಗಂಡಸುತನ ತೋರಿಸಲು ಹೋಗಿ ಮಂತ್ರಿ ಪದವಿ ಕಳೆದುಕೊಂಡಿದ್ದು ಗೊತ್ತು – ಸವದಿ ಟಾಂಗ್
ಅಥಣಿ : ರಮೇಶ ಜಾರಕಿಹೋಳಿಯವರು ಗಂಡಸ್ತನ ಇದ್ದರೆ ಗೆದ್ದು ಬಾ ಅಂತ ನನಗೆ ಪದೇ, ಪದೇ ಸವಾಲು ಹಾಕುತ್ತಿದ್ದು, ಇದರಲ್ಲಿ ಗಂಡಸ್ತನವೇನು ಬರುತ್ತದೆ. ಜನರ ಮನಸ್ಸನ್ನು ಒಲಿಸಿಕೊಳ್ಳುವದನ್ನು ಬಿಟ್ಟು ಉಡಾಪೆ ಮಾತನಾಡುತ್ತಿರುವದು ಹಾಸ್ಯಾಸ್ಪದ ಎಂದು ಅಥಣಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ಹೇಳಿದರು.
ಅವರು ತಾಲೂಕಿನ ಯಕ್ಕಂಚಿ, ಯಲಿಹಡಲಗಿ ಮತ್ತು ಅಡಹಳ್ಳಿ ಗ್ರಾಮದಲ್ಲಿ ನಡೆಸಿದ ಪ್ರಚಾರ ಸಭೆಯಲ್ಲಿ ಮಾತನಾಡಿ. ಅವರು ಗಂಡಸ್ತನ ತೋರಿಸಲು ಹೋಗಿ ಮಂತ್ರಿ ಪದವಿಯನ್ನು ಕಳೆದುಕೊಂಡಿದ್ದು ಎಲ್ಲರಿಗೂ ಜಗಜ್ಜಾಹಿರಾಗಿದೆ. ನಾನು 20 ವರ್ಷಗಳ ಹಿಂದೆ ಅಥಣಿಯಲ್ಲಿ ಭಾಜಪ ಪಕ್ಷದ ಗ್ರಾಪಂ, ತಾಪಂ, ಜಿಪಂ ಒಬ್ಬರೂ ಚುನಾಯಿತ ಪ್ರತಿನಿಧಿ ಇರದಿದ್ದಾಗ ಪಕ್ಷವನ್ನು ಸಂಘಟಿಸಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಪಕ್ಷ ನನಗೆ ಎಷ್ಟು ಅಧಿಕಾರ ಕೊಟ್ಟಿದಿಯೋ ಅದಕ್ಕಿಂತ ಹೆಚ್ಚು ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಿದ್ಧೇನೆ.
2018ರ ಚುನಾವಣೆಯಲ್ಲಿ ಅನೇಕರು ಶಾಸಕರಾಗಲು ಶ್ರಮೀಸಿದ್ಧೆನೆ. ಉಪ-ಚುನಾವಣೆಯಲ್ಲಿ ಉಸ್ತುವಾರಿ ನೀಡಿದಾಗ ನನ್ನ ಅವಶ್ಯಕತೆಯಿತ್ತು. ಆದರೆ, ಟಿಕೇಟ್ ನೀಡದೇ ನನಗೆ ಭಾಜಪ ಮೋಸ ಮಾಡಿತು ಎಂದು ಹರಿಹಾಯ್ದರು. ಬಿಜೆಪಿ ನಾಯಕರು ನನಗೆ ಮಾತು ಕೊಟ್ಟಂತೆ ಟಿಕೆಟ್ ನೀಡದೆ, ನನಗೆ ಮೋಸ ಮಾಡಿದರು. ಕಾಂಗ್ರೆಸ್ ಪಕ್ಷದಿಂದ ನಾನು ಸ್ಪರ್ಧಿಸಿ ನಿಮ್ಮ ಮುಂದೆ ಬಂದಿದ್ದೇನೆ.
ಸ್ವಾಭಿಮಾನಿ ಮತದಾರರು ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸುವ ಮೂಲಕ ನನಗೆ ತಮ್ಮ ಅತ್ಯಮೂಲ್ಯವಾದ ಮತಗಳನ್ನು ನೀಡಿ ನನಗೆ ಸವಾಲು ಹಾಕುವವರಿಗೆ ತಕ್ಕ ಪಾಠ ಕಲಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.


