
ಖಾಸಗಿ ಕಾರ್ಖಾನೆಗಳಿಂದ ತೂಕದಲ್ಲಿ ಮೋಸ ; ಗುಡುಗಿದ ಲಕ್ಷ್ಮಣ ಸವದಿ

ಅಥಣಿ : ಖಾಸಗಿ ಸಕ್ಕರೆ ಕಾರ್ಖಾನೆಗಳು ಕಬ್ಬಿನ ತೂಕದಲ್ಲಿ ಮೋಸ ಮಾಡುತ್ತಿವೆ. ಪ್ರತಿ ಲೋಡ್ ನಲ್ಲಿ ಸುಮಾರು ಐದು ಸಾವಿರ ರೂ. ವರೆಗೂ ಹಣ ಹೊಡೆಯುತ್ತಾರೆ. ಆದರೆ ಸಹಕಾರಿ ಕಾರ್ಖಾನೆಗಳು ಪ್ರಾಮಾಣಿಕವಾಗಿದ್ದು ನಷ್ಟ ಅನುಭವಿಸುತ್ತಿವೆ. ರೈತರ ಸಹಕಾರದಿಂದ ಮಾತ್ರ ಉತ್ತಮವಾಗಿ ಕಾರ್ಖಾನೆ ನಡೆಸಲು ಸಾಧ್ಯ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಹಮ್ಮಿಕೊಂಡಿದ್ದ 33 ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದರು. ಖಾಸಗಿ ಸಕ್ಕರೆ ಕಾರ್ಖಾನೆಗಳು ತೂಕದಲ್ಲಿ ಮೋಸ ಮಾಡುವುದು ಕಂಡುಬಂದಿದೆ. ಇದೇ ಕಾರಣಕ್ಕೆ ಖಾಸಗಿ ಕಾರ್ಖಾನೆಗಳು ಲಾಭದಲ್ಲಿ ಇವೆ ಎಂದು ಸವದಿ ಆರೋಪಿಸಿದರು.
ಸರಕಾರದ ನಿಯಮ ಮೀರಿ ಸಕ್ಕರೆ ಮಾರಾಟ ಮಾಡಲಾಗುತ್ತಿದೆ. ಕೇಂದ್ರದ ನಿಯಮ ಯಾರೂ ಪಾಲಿಸುತ್ತಿಲ್ಲ. ಈ ಎಲ್ಲಾ ಮೋಸದಾಟಕ್ಕೆ ಕಡಿವಾಣ ಹಾಕಲು ರೈತರ ಪರವಾಗಿ ಸರಕಾರದ ಮಟ್ಟದಲ್ಲಿ ಹೋರಾಟ ಮಾಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಕಾಗವಾಡ ಶಾಸಕ ರಾಜು ಕಾಗೆ ಉಪಸ್ಥಿತರಿದ್ದರು.