
ಸೋಲಿನ ಸೇಡು ತೀರಿಸಿಕೊಳ್ಳುವರಾ ಸಾಹುಕಾರ ; ರಾಜ್ಯದಲ್ಲೇ ದೊಡ್ಡ ಗ್ರಾ.ಪಂ ಗದ್ದುಗೆ ಗುದ್ದಾಟ…!

ಅಥಣಿ : ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಪಂಚಾಯಿತಿ ಎಂಬ ಹೆಗ್ಗಳಿಕೆ ಹೊಂದಿರುವ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಲಾಗಿದ್ದು ಮಂಗಳವಾರ ಗೊತ್ತುವಳಿ ಸಭೆ ನಡೆಯಲಿದೆ.
ಹೌದು 56 ಸದಸ್ಯ ಬಲದ ಸಂಕೋನಟ್ಟಿ ಗ್ರಾಮ ಪಂಚಾಯತಿ ರಾಜ್ಯದಲ್ಲೇ ಅತಿದೊಡ್ಡ ಗ್ರಾಮ ಪಂಚಾಯತಿ ಎಂಬ ಹಿರಿಮೆ ಪಡೆದುಕೊಂಡಿದೆ. 2023 ರಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಾಜಿ ಶಾಸಕ ಮಹೇಶ್ ಕುಮಠಳ್ಳಿ ಆಪ್ತ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಗ್ರಾ.ಪಂ ಚುನಾವಣೆಯಲ್ಲಿ ಗೆದ್ದಿದ್ದ ಸದಸ್ಯರು ಹಾಲಿ ಶಾಸಕ ಲಕ್ಷ್ಮಣ ಅವದಿ ಜೊತೆ ಗುರುತಿಸಿಕೊಂಡಿದ್ದರು. ಆದರೆ ಅಧ್ಯಕ್ಷ ಆಯ್ಕೆ ಸಂದರ್ಭದಲ್ಲಿ 31 ಜನ ಕುಮಠಳ್ಳಿ ಆಪ್ತನಿಗೆ ಮತ ಹಾಕಿ ಸವದಿ ಬೆಂಬಲಿಗರಿಗೆ ಮುಖಭಂಗ ಉಂಟುಮಾಡಿದ್ದರು.
ಆದರೆ ಈಗ ಹಾಲಿ ಅಧ್ಯಕ್ಷ ಸಂತೋಷ ಕಕಮರಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಲಾಗಿದೆ. ಇದಕ್ಕೆ ರಾಜಕೀಯ ಕಾರಣವೂ ಎದ್ದು ಕಾಣುತ್ತಿದ್ದು, ಶಾಸಕ ಲಕ್ಷ್ಮಣ ಸವದಿ ಆಪ್ತನಿಗೆ ಅಧಿಕಾರ ಗದ್ದುಗೆ ಕೊಡಿಸಿ ಕುಮಠಳ್ಳಿ ಹಾಗೂ ರಮೇಶ್ ಜಾರಕಿಹೊಳಿಗೆ ಮುಖಂಭಂಗ ಮಾಡುವ ಉದ್ದೇಶ ಇದೆ ಎಂದು ಹೇಳಲಾಗುತ್ತಿದೆ.
ಅವಿಶ್ವಾಸ ಗೊತ್ತುವಳಿ ಮಂಗಳವಾರ ನಡೆಯಲಿದ್ದು ಹಾಲಿ ಅಧ್ಯಕ್ಷರು ತಮ್ಮ ಪರವಾಗಿ ಸದಸ್ಯರ ಬೆಂಬಲ ಇದೆ ಎಂಬುದನ್ನು ತೋರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈಗಾಗಲೇ ಹಾಲಿ ಅಧ್ಯಕ್ಷ 26 ಗ್ರಾಮ ಪಂಚಾಯತಿ ಸದಸ್ಯರ ಜೊತೆ ರೆಸಾರ್ಟ್ ಗೆ ತೆರಳಿದ್ದಾರೆ.
ನಾಳೆ ನಡೆಯುವ ಅವಿಶ್ವಾಸ ಗೊತ್ತುವಳಿಯಲ್ಲಿ ಹಾಲಿ ಅಧ್ಯಕ್ಷ ಗೆದ್ದು ಮತ್ತೆ ಜಾರಕಿಹೊಳಿ ಹಾಗೂ ಕುಮಠಳ್ಳಿ ಬಲ ಪ್ರದರ್ಶನ ನಡೆಯುತ್ತಾ ಅಥವಾ ಸವದಿ ತಮ್ಮ ಬೆಂಬಲಿಗರನ್ನು ಗೆಲ್ಲಿಸಿ ಬಿಜೆಪಿ ನಾಯಕರಿಗೆ ಟಕ್ಕರ್ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕು.