ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಮೋದಿಯಿಂದ ಜನರಿಗೆ ಮೋಸ – ಲಕ್ಷ್ಮಣ ಸವದಿ ಆರೋಪ
ಅಥಣಿ : ದೇಶದಲ್ಲಿ 10 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ, ಜನರ ಕಣ್ಣಿಗೆ ಮಂಕುಬೂದಿ ಎರಚುವ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ ಎಂದು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಆರೋಪಿಸಿದರು.
ಅವರು ಬುಧವಾರ ಇಲ್ಲಿನ ಪುರಸಭೆ ಕಾಂಪ್ಲೆಕ್ಸ್ ನಲ್ಲಿ ಕಾಂಗ್ರೆಸ್ ಪಕ್ಷದ ಜನ ಸಂಪರ್ಕ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದರು. ನಾನು ಕಳೆದ 25 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿದ್ದು, ಅಲ್ಲಿನ ಮುಖಂಡರ ತಂತ್ರಗಾರಿಕೆ ಬಗ್ಗೆ ನನಗೆ ಅರಿವಿದೆ. ಒಂದು ಸುಳ್ಳನ್ನು ಅನೇಕ ಬಾರಿ ಹೇಳುವ ಮೂಲಕ ಅದನ್ನೇ ಸತ್ಯ ಎಂದು ಬಿಂಬಿಸುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ದೇಶದ ಜನರು ಅನೇಕ ನಿರೀಕ್ಷೆಗಳನ್ನು ಹೊಂದಿದ್ದರು. ಬಡ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪೆಟ್ರೋಲ್, ಡಿಸೈಲ್, ಗ್ಯಾಸ್ ಬೆಲೆ ಕಡಿಮೆ ಮಾಡುತ್ತೇವೆ. ದೇಶದ ಎಲ್ಲೆಡೆ ಬುಲೆಟ್ ಟ್ರೈನ್, ತಾಲೂಕ ಕೇಂದ್ರಗಳಲ್ಲಿ ವಿಮಾನ ನಿಲ್ದಾಣ ಮಾಡುವುದಾಗಿ ಸೋಶಿಯಲ್ ಮೀಡಿಯಾಗಳನ್ನು ಬಳಸಿಕೊಂಡು ಪ್ರಚಾರ ಪಡೆದುಕೊಂಡರು.
ಆದರೆ ಕಳೆದ ಹತ್ತು ವರ್ಷಗಳಲ್ಲಿ ನಿರೀಕ್ಷೆ ಪ್ರಮಾಣದ ಪ್ರಗತಿ ಕಾಣಲಿಲ್ಲ. ಕನಿಷ್ಠ ಪಕ್ಷ ನದಿಗಳ ಜೋಡಣೆ ಮಾಡುತ್ತೀವಿ ಎನ್ನುವ ಆಶ್ವಾಸನೆ ಕೂಡ ಈಡೇರಲಿಲ್ಲ. ಬಿಜೆಪಿ ಅನೇಕ ಸುಳ್ಳುಗಳನ್ನು ಸತ್ಯ ಎಂದು ಬಿಂಬಿಸಿ ದೇಶದ ಜನರಿಗೆ ಮೋಸ ಮಾಡುತ್ತಿದ್ದಾರೆ.
ಲೋಕಸಭಾ ಚುನಾವಣಾ ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಪ್ರತಿಯೊಬ್ಬ ಮತದಾರರಿಗೆ ಮನವರಿಕೆ ಮಾಡುವ ಮೂಲಕ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಕು. ಪ್ರಿಯಾಂಕ ಸತೀಶ್ ಜಾರಕಿಹೊಳಿ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸದಾಶಿವ ಬುಟಾಳಿ, ಗಜಾನನ ಮಂಗಸೂಳಿ ,ಅಸ್ಲಂ ನಾಲಬಂದ ,ಬಸವರಾಜ ಗುಮಟಿ, ರಮೇಶ ಸಿಂದಗಿ, ಅಥಣಿ ಬ್ಲಾಕ್ ಅಧ್ಯಕ್ಷ ಸಿದ್ದಾರ್ಥ ಶಿಂಗೆ, ಬಾಬು ಖೇಮಲಾಪೂರ ,ಸುರೇಶ ಮಾಯಣ್ಣವರ ,ಶಾಂತಿನಾಥ ನಂದೇಶ್ವರ, ರಾಮನಗೌಡ ಪಾಟೀಲ, ತೆಲಸಂಗ ಬ್ಲಾಕ್ ಅಧ್ಯಕ್ಷ ಅಮೋಘಸಿದ್ಧ ಕೊಬ್ಬರಿ,ಪುರಸಭಾ ಸದಸ್ಯ ರಾವಸಾಬ ಐಹೋಳೆ, ವಿಲೀನ ಯಲಮಲ್ಲೇ, ರವಿ ಬಡಕಂಬಿ ಅನೇಕರು ಉಪಸ್ಥಿತರಿದ್ದರು.