Select Page

ಸಂದಿಗ್ಧ ಸ್ಥಿತಿಯಲ್ಲಿ ಅಥಣಿ ಸಾಹುಕಾರ

ಸಂದಿಗ್ಧ ಸ್ಥಿತಿಯಲ್ಲಿ ಅಥಣಿ ಸಾಹುಕಾರ

ಬೆಳಗಾವಿ : ಮಾಜಿ‌ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಮಾಜಿ ಡಿಸಿಎಂ ಹಾಗೂ ಲಿಂಗಾಯತ ಸಮುದಾಯದ ಹಿರಿಯ ನಾಯಕ ಲಕ್ಷ್ಮಣ ಸವದಿ ಕಾಂಗ್ರೆಸ್ ತೊರೆಯುವ ಸುದ್ದಿ ಎಲ್ಲೆಡೆ ಸದ್ದು ಮಾಡಿದೆ. ಅಥಣಿ ಕ್ಷೇತ್ರದ ಟಿಕೆಟ್ ನಿರಾಕರಣೆ  ಕಾರಣ ನೀಡಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದ ಸವದಿ ಅವರನ್ನು ಸೆಳೆಯಲು ಕಮಲಪಡೆ ಕಸರತ್ತು ನಡಿಸಿದೆ. ಈ ಎಲ್ಲಾ ಬೆಳವಣಿಗೆಗಳು ಲಕ್ಷ್ಮಣ ಸವದಿ ಅವರನ್ನು ಅಡಕತ್ತರಿಗೆ ಸಿಲುಕಿಸದೆ ಎನ್ನುತ್ತಿದೆ ಇವರ ಆಪ್ತವಲಯ.

ಬೆಳಗಾವಿ ವಾಯ್ಸ್ – e paper

ಅಥಣಿ ಬಿಜೆಪಿ ಟಿಕೆಟ್ ನಿರಾಕರಣೆ ಹಾಗೂ ರಮೇಶ್ ಜಾರಕಿಹೊಳಿಗೆ ಪಕ್ಷದಲ್ಲಿ ಹೆಚ್ಚಿನ ಪ್ರಾಶಸ್ತ್ಯ ವಿಚಾರವಾಗಿ ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರಿ, ರಾಜ್ಯದಲ್ಲೇ ಎರಡನೇ ಅತೀ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಅಷ್ಟೇ ಅಲ್ಲದೆ ಅಥಣಿ ಪಕ್ಕದ ಕ್ಷೇತ್ರಗಳಾದ ಕಾಗವಾಡ, ಕುಡಚಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿನ್ನಡೆ ಮಾಡುವಲ್ಲಿ ಯಶಸ್ವಿಯಾಗಿದ್ದರು ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿ ಭಾಗ್ಯ ಪಡೆಯಲು ಸಾಧ್ಯವಾಗಲಿಲ್ಲ.

ಸಧ್ಯ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ವಿಚಾರವಾಗಿ ಬಿಜೆಪಿ ಹೈಕಮಾಂಡ್ ಬಲೆ ಬೀಸಿದ್ದು ಗುಟ್ಟಾಗಿ ಏನು ಉಳಿದಿಲ್ಲ. ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೂ ಸವದಿ ಬಿಜೆಪಿ ಸೇರ್ಪಡೆಯಾದರೆ ಸ್ವಾಗತ: ಎಂದಿದ್ದಾರೆ. ಇನ್ನೂ ಬೆಳಗಾವಿ ಬಿಜೆಪಿ ಮುಖಂಡರು ಸವದಿ ಜೊತೆ ಪಕ್ಷ ಸೇರ್ಪಡೆ ಕುರಿತು ಚರ್ಚೆ ಮಾಡಿರುವುದಾಗಿ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಆದರೆ ಈ ಎಲ್ಲಾ ಬೆಳವಣಿಗೆ ನಡುವೆಯೂ ಸವದಿ ಅವರಿಗೆ ಬಿಜೆಪಿ ಸೇರ್ಪಡೆ ನಿರ್ಧಾರವನ್ನು ಸುಲಭವಾಗಿ ಒಪ್ಪಿಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ನಲ್ಲಿ ಒಬ್ಬಂಟಿಯಾದರಾ ಸವದಿ…?

ಚುನಾವಣೆ ಸಂದರ್ಭದಲ್ಲಿ ಲಕ್ಷ್ಮಣ ಸವದಿ ಅವರಿಗೆ ಕಾಂಗ್ರೆಸ್ ನಲ್ಲಿ ಸಿಕ್ಕ ಗೌರವ ಸಧ್ಯ ಕಡಿಮೆಯಾದಂತೆ ಕಾಣುತ್ತಿದೆ. ಸಚಿವ ಸತೀಶ್ ಜಾರಕಿಹೊಳಿ ಅವರ ಪ್ರಭಲ ಹಿಡಿತದ ನಡುವೆ ಸವದಿಗೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕೇವಲ ಹೆಸರಿಗೆ ಎಂಬಂತಾಗಿದೆ.‌ ಅಷ್ಟೇ ಅಲ್ಲದೆ ಬಿಜೆಪಿಯಲ್ಲಿ‌ ಮುಂದಿನ ಸಿಎಂ ಎಂದು ಬಿಂಬಿತವಾಗಿದ್ದ ಇವರು ಕಾಂಗ್ರೆಸ್ ನಲ್ಲಿ ಸಚಿವಸ್ಥಾನಕ್ಕೂ ಲೆಕ್ಕಕ್ಕೆ ಇಲ್ಲದ ಪರಿಸ್ಥಿತಿ ಎದುರಾಗಿದೆ. ಈ ಎಲ್ಲಾ ಬೆಳವಣಿಗೆಯಿಂದ ಲಕ್ಷ್ಮಣ ಸವದಿ ಕಾಂಗ್ರೆಸ್ ತೊರೆಯುವ ಮನಸ್ಸು ಮಾಡಿರಬಹುದು ಎಂದು ಹೇಳಲಾಗುತ್ತಿದೆ.

ಅಡಕತ್ತರಿಯಲ್ಲಿ ಸಾಹುಕಾರ್ : ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುವ ನಿರ್ಧಾರ ಲಕ್ಷ್ಮಣ ಸವದಿ ಅಂತಹ ನಾಯಕರಿಗೆ ಕೊಂಚ ಕಷ್ಟ. ಈಗಾಗಲೇ ಬಿಜೆಪಿ ವಿರುದ್ಧ ಬಹಿರಂಗ ಸಮರ ಸಾರಿದ್ದ ಇವರು ಅಥಣಿ‌‌ ಕ್ಷೇತ್ರದಲ್ಲಿ ದಾಖಲೆ ಮತ ಪಡೆದು ಗೆಲುವು ಸಾಧಿಸಿದ್ದರು. ಈಗ ಮತ್ತೆ ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರೆ ಇವರ ಬೆಂಬಲಿಗರು ದೂರ ಹೋಗುವ ಭಯವೂ ಇವರಲ್ಲಿದೆ.

ಅಷ್ಟೇ ಅಲ್ಲದೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ನೇರವಾಗಿ ರಾಜಕೀಯ ವಿರೋಧ ಮಾಡಿಕೊಂಡು ಬಂದಿರುವ ಲಕ್ಷ್ಮಣ ಸವದಿ ಅವರಿಗೆ ಈಗ ಮತ್ತದೇ ನಾಯಕನ ಜೊತೆ ಕೆಲಸ ಮಾಡುವ ಮನಸ್ಥಿತಿಯೂ ಇಲ್ಲ ಎಂಬುದನ್ನು ಅವರ ಆಪ್ತ ಮೂಲಗಳು ಹೇಳುತ್ತವೆ. ಸಧ್ಯ ಬೆಳಗಾವಿ ಬಿಜೆಪಿ ಮನೆ ಒಂದು ಮೂರು ಬಾಗಿಲು ಎಂಬ ಪರಿಸ್ಥಿತಿಯಲ್ಲಿ ಇದೆ. ಇನ್ನೂ ಕೈಯಲ್ಲಿರುವ ಶಾಸಕ ಸ್ಥಾನ ಬಿಟ್ಟು ಮತ್ತೆ ಬಿಜೆಪಿಯೊಳಗೆ ಗುದ್ದಾಟ ನಡೆಸುವುದು ಬೇಡ ಎನ್ನುತ್ತಿದ್ದಾರೆ ಕೆಲ ಆಪ್ತರು. ಇದೇ ಕಾರಣಕ್ಕೆ ಬಿಜೆಪಿ ಸೇರ್ಪಡೆ ವಿಚಾರವಾಗಿ ಸವದಿ ಅಡಕತ್ತರಿಯಲ್ಲಿ ಸಿಲುಕಿದ್ದು ಸುಳ್ಳಲ್ಲ.

ಸವದಿ ಜೊತೆ ಹಲವು ಬಿಜೆಪಿ ನಾಯಕರು ಚರ್ಚೆ : ಲಕ್ಷ್ಮಣ ಸವದಿ ಅವರನ್ನು ಬಿಜೆಪಿಗೆ ಕರೆತರಲು ಕೆಲ ದಿನಗಳಿಂದ ಕಮಲ ಪಾಳೆಯದ ನಾಯಕರು ಕಸರತ್ತು ನಡೆಸಿದ್ದು ಗುಟ್ಟಾಗಿ ಏನು ಉಳಿದಿಲ್ಲ. ಈಗಾಗಲೇ ಸವದಿ ಪರ ಹೈಕಮಾಂಡ್ ಮಟ್ಟದಲ್ಲಿ ಕೆಲ ಬಿಜೆಪಿ ಹಿರಿಯ ನಾಯಕರು ಚರ್ಚೆ ನಡೆಸಿದ್ದಾರೆ. ಜೊತೆಗೆ ಆರ್ ಎಸ್ ಎಸ್ ನ ಪ್ರಮುಖರು ಕೂಡಾ ಸವದಿ ಅವರನ್ನು ಬಿಜೆಪಿಗೆ ಕರೆತರುವ ಕುರಿತು ಚರ್ಚೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಬೆಳಗಾವಿ ಜಿಲ್ಲೆಯ ಸ್ಥಳೀಯ ಬಿಜೆಪಿ ನಾಯಕರು ಸವದಿ ಜೊತೆ ಚರ್ಚೆ ನಡೆಸಿ ಬಿಜೆಪಿ ಬರುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ ಲಕ್ಷ್ಮಣ ಸವದಿ ಮಾತ್ರ ಕೆಲ ಷರತ್ತುಗಳನ್ನು ಹಾಕಿದ್ದು ಹೈಕಮಾಂಡ್ ಒಪ್ಪಿಗೆ ಸೂಚಿಸಿದರೆ ಮಾತ್ರ ಬಿಜೆಪಿಗೆ ಬರುವ ವಿಚಾರ ಮಾಡಬಹುದು ಎಂದು ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲವರು ಹೇಳುವ ಪ್ರಕಾರ ಸವದಿ ಅವರಿಗೆ ಲೋಕಸಭಾ ಟಿಕೆಟ್ ನೀಡಿ ಅವರ ಮಗನಿಗೆ ವಿಧಾನಸಭಾ ಅಖಾಡಕ್ಕೆ ಇಳಿಸುವ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರು ಇದ್ದಾರೆ ಎನ್ನಲಾಗುತ್ತಿದೆ‌.

Advertisement

Leave a reply

Your email address will not be published. Required fields are marked *

error: Content is protected !!