ಸವದಿ ಬಿಜೆಪಿ ಸೇರ್ಪಡೆ ಕುರಿತು ರಮೇಶ್ ಕತ್ತಿ ಸ್ಟೋಟಕ ಹೇಳಿಕೆ…! ಸಾಹುಕಾರ್ ನಡೆ ಕಮಲದತ್ತ…?
ಬೆಳಗಾವಿ : ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಅವರನ್ನು ಬಿಜೆಪಿಗೆ ಕರೆತರಲು ಬಿಜೆಪಿ ಹೈಕಮಾಂಡ್ ಮಾತುಕತೆ ನಡೆಸಿದ್ದು ಈ ನಿಟ್ಟಿನಲ್ಲಿ ಸ್ಥಳೀಯ ನಾಯಕರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಮಾಜಿ ಸಂಸದ ರಮೇಶ್ ಕತ್ತಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಇವರು. ಶೆಟ್ಟರ್ ಹಾಗೂ ಸವದಿ ಇಬ್ಬರೂ ಬಿಜೆಪಿ ಒಳಗೆ ಇದ್ದವರು. ಈಗಾಗಲೇ ಶೆಟ್ಟರ್ ಬಂದಿದ್ದು ಸ್ವಾಗತಾರ್ಹ ನಡೆ. ಲಕ್ಷ್ಮಣ ಸವದಿ ಅವರನ್ನು ಬಿಜೆಪಿಗೆ ಕರೆತರಲು ಹೈಕಮಾಂಡ್ ಜೊತೆ ಚರ್ಚೆ ನಡೆದಿವೆ. ಈಗಾಗಲೇ ಸ್ಥಳೀಯ ಮುಖಂಡರು ಮಾತುಕತೆ ನಡೆಸುದ್ದು ಅದರಲ್ಲಿ ನಾನು ಒಬ್ಬ ಎಂಬ ಮಾತನ್ನು ಹೇಳಿದರು.
—–ಬಿಜೆಪಿ ನಾಯಕರ ಜೊತೆ ಸವದಿ ಓಡಾಟ —–
ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ನಂತರ ಮಾಜಿ ಡಿಸಿಎಂ ಹಾಗೂ ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಪಕ್ಷ ತೊರೆಯುತ್ತಾರೆ ಎಂಬ ಊಹಾಪೋಹ ಬೆನ್ನಲ್ಲೇ, ಸ್ಥಳೀಯ ಬಿಜೆಪಿ ಮುಖಂಡರ ಜೊತೆ ಓಡಾಟ ನಡೆಸಿದ್ದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಮೂಡಿಸಿದೆ.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ನಿರಾಕರಿಸಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಸೇರಿ ಶಾಸಕರಾಗಿದ್ದರು. ಆದರೆ ಕೆಲ ದಿನಗಳಿಂದ ಲಕ್ಷ್ಮಣ ಸವದಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಊಹಾಪೋಹಗಳು ಜೋರಾಗಿವೆ. ಈ ಮಧ್ಯೆ ಸೋಮವಾರ ಬೆಳಗಾವಿ ಡಿಸಿಸಿ ಬ್ಯಾಂಕ್ ಸಾಮಾನ್ಯ ಸಭೆ ಹಿನ್ನಲೆಯಲ್ಲಿ ಸವದಿ ಬಿಜೆಪಿ ಮುಖಂಡರ ಜೊತೆ ಓಡಾಟ ನಡೆಸಿ ಒಟ್ಟಿಗೆ ಊಟ ಮಾಡಿದ್ದು ಕುತೂಹಲ ಮೂಡಿಸಿದೆ.
ನಗರದ ಲಕ್ಷ್ಮಣ ಸವದಿ ಅವರ ಖಾಸಗಿ ನಿವಾಸದಲ್ಲಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಕಿತ್ತೂರಿನ ಮಾಜಿ ಬಿಜೆಪಿ ಶಾಸಕ ಮಹಾಂತೇಶ್ ದೊಡ್ಡಗೌಡರ್ ಜೊತೆ ಸಭೆ ನಡೆಸಿದ್ದು ನಂತರ ಒಂದೇ ವಾಹನದಲ್ಲಿ ಡಿಸಿಸಿ ಬ್ಯಾಂಕ್ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದಾರೆ. ಲಕ್ಷ್ಮಣ ಸವದಿ ಅವರ ನಡೆ ತೀವ್ರ ಕುತೂಹಲ ಮೂಡಿಸಿದ್ದು ಬಿಜೆಪಿ ಸೇರ್ಪಡೆ ಚರ್ಚೆಗೆ ಮತ್ತಷ್ಟು ಇಂಬು ನೀಡಿದಂತಾಗಿದೆ.
ಈಗಾಗಲೇ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದಲ್ಲಿ ಮಾಜಿ ಸಂಸದ ರಮೇಶ್ ಕತ್ತಿ ಇದ್ದು, ಇವರು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಆದರೆ ಈ ಹಿಂದೆ ಡಿಸಿಸಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗಿತ್ತುವಳಿ ಮಂಡಿಸುವ ಕುರಿತು ಸವದಿ ಬಣ ನಿರ್ಧರಿಸಿದೆ ಎಂಬ ಮಾತು ಕೇಳಿಬಂದಿತ್ತಾದರು ಈ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳುವ ಮೂಲಕ ಲಕ್ಷ್ಮಣ ಸವದಿ ತಮ್ಮ ಹಳೆ ಬಿಜೆಪಿ ಗೆಳೆಯರ ಜೊತೆ ದೋಸ್ತಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರಾ ಎಂಬ ಸಂಶಯ ಮೂಡಿದೆ.
ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ಮುಂಚಿತವಾಗಿ ಪಕ್ಷಾಂತರ ಕುರಿತು ಕಡ್ಡಿ ತುಂಡು ಮಾಡಿದಂತೆ ಮಾತನಾಡುತ್ತಿದ್ದ ಲಕ್ಷ್ಮಣ ಸವದಿ ಅವರ ಮಾತಿನ ವರಸೆ ಬದಲಾಗಿದೆ. ಬಿಜೆಪಿ ಸೇರ್ಪಡೆ ಆಗುವಂತೆ ಅನೇಕ ಮುಖಂಡರು ಒತ್ತಡ ಹೇರಿದ್ದಾರೆ ಎಂಬ ಮಾತು ಕೇಳಿಬರುತ್ತಿದ್ದು ಈ ಕುರಿತು ಸವದಿ ಹಾರಿಕೆ ಉತ್ತರ ನೀಡುತ್ತಾ ಬಂದಿದ್ದಾರೆ. ಇನ್ನೂ ರಾಜಕೀಯ ಎದುರಾಳಿ ರಮೇಶ್ ಜಾರಕಿಹೊಳಿ ಕೂಡಾ ಸವದಿ ಬಿಜೆಪಿ ಸೇರ್ಪಡೆ ಕುರಿತು ಎಲ್ಲಿಯೂ ವಿರೋಧ ವ್ಯಕ್ತಪಡಿಸದಿರುವುದು ಹಲವು ಅನುಮಾನ ಹುಟ್ಟುಹಾಕಿದೆ.
*******************
ನಾವು ಇವತ್ತು ಡಿಸಿಸಿ ಬ್ಯಾಂಕ್ ಬೋರ್ಡ್ ಮೀಟಿಂಗ್ ಮಾಡುವ ಉದ್ದೇಶದಿಂದ ಬಂದಿದ್ದು ಇದರಲ್ಲಿ ಯಾವುದೇ ವಿಶೇಷವಿಲ್ಲ. ಎಲ್ಲ ನಾಯಕರು ಸೇರಿ ಮಾಡಿದ್ದೇವೆ ಹೊರತು ಬೇರೆ ಏನಿಲ್ಲ. ನಮ್ಮ ಮಧ್ಯೆ ಯಾವುದೇ ಟೀಂ ಇಲ್ಲ ಎಲ್ಲರೂ ಪಕ್ಷಾತೀತವಾಗಿ ನಡೆದುಕೊಂಡು ಬಂದಿದ್ದೇವೆ.
ಲಕ್ಷ್ಮಣ ಸವದಿ – ಅಥಣಿ ಶಾಸಕ
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನು ಚುನಾವಣೆ ಒಳಗೆ ಕೆಳಗಿಳಿಸುತ್ತಿರಾ ಎಂಬ ಪ್ರಶ್ನೆಗೆ ಅದೆಲ್ಲವೂ ಸಹ ಊಹಾಓಪೋಹ. ಯಾವ ಟೀಂ ಇಲ್ಲ.ರಮೇಶ ಕತ್ತಿ ಇರಲಿ ನಾನಿರಲಿ ಪಕ್ಷಾತೀತವಾಗಿಯೇ ನಡೆದುಕೊಂಡು ಬಂದಿದ್ದೆವೆ. ಒಂದುವರೆ ವರ್ಷದಲ್ಲಿ ಚುನಾವಣೆ ಬರುತ್ತೆ ಎಂದರು.
ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡಿಸುವ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ಅಂತಹ ಯಾವುದೇ ಬೆಳಗವಣಿಗೆ ಪ್ರಸ್ತಾವಣೆ ನನ್ನ ಮುಂದೆ ಈವರೆಗೂ ಬಂದಿಲ್ಲ. ನನ್ನ ಮುಂದೆ ಅಂತಹ ಪ್ರಶ್ನೆಯೇ ಬಂದಿಲ್ಲ ಎಂದರು.
ಸವದಿಯವರನ್ನು ಬಿಜೆಪಿಗೆ ಕರೆತರಲು ಒಂದು ಟೀಂ ರೆಡಿಯಾಗಿದೆಯಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಎಲ್ಲ ಸಹಜವಾಗಿ ನಡೆಯುವಂತದ್ದು ಅವರು ಟೀಂ ಮಾಡಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ನಾನು ಕಾಂಗ್ರೆಸ್ ಪಕ್ಷದ ಚಿನ್ಹೆಯ ಮೇಲೆ ಆಯ್ಕೆಯಾಗಿದ್ದೆನೆ. ಕಾಂಗ್ರೆಸ್ ಪಕ್ಷದ ಶಾಸಕನಾಗಿ ಕೆಲಸ ಮಾಡ್ತಿದ್ದಿನಿ. ಅಂತಹ ಪ್ರಶ್ನೆ ನನ್ನ ಮುಂದೆ ಇಲ್ಲ. ಇನ್ನು ನಾನಾಗಲಿ ನನ್ನ ಮಗನಾಗಲಿ ಲೋಕಸಭೆಗೆ ಸ್ಪರ್ಧೆ ಮಾಡಲ್ಲ. ಅದಕ್ಕಾಗಿ ನಾನಾಗಲಿ ನನ್ನ ಮಗನಾಗಲಿ ಅರ್ಜಿಯನ್ನೂ ಸಹ ಹಾಕಿಲ್ಲ ಎಂದರು.
ಲಕ್ಷ್ಮಣ ಸವದಿ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಂಡು ನಂತರ ಮಾತಾಡ್ತಿನಿ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ನನ್ನ ಮನಸಿನಲ್ಲಿ ಏನಿದೆ ಎಂದು ಯಾರಿಗೂ ತಿಳಿದುಕೊಳ್ಳಲು ಆಗಲ್ಲ. ಅದು ನನಗೆ ಮತ್ತು ಆ ಭಗವಂತನಿಗೆ ಮಾತ್ರ ಗೊತ್ತು ಎಂದರು.
ಇನ್ನು ಬಿ.ಎಲ್. ಸಂತೋಷ ಅವರು ನಿಮ್ಮನ್ನ ಸಂಪರ್ಕ ಮಾಡೋಕೆ ಪ್ರಯತ್ನ ಮಾಡಿದ್ದಾರಾ ಎಂಬುದಕ್ಕೆ ಅವರ್ಯಾರು ನನ್ನ ಸಂಪರ್ಕ ಮಾಡಿಲ್ಲ ಈಗ ಆ ಪ್ರಶ್ನೆ ಉದ್ಭವಿಸಲ್ಲ. ಅವರಿಗೆ ಅವಶ್ಯಕತೆ ಅನಿವಾರ್ಯ ಇದ್ದಾಗ ಸ್ವಾಭಾವಿಕವಾಗಿ ಕೇಳ್ತಾರೆ. ಆದರೆ ತೀರ್ಮಾಣ ಮಾಡೋದು ನಾನು ಅಲ್ವೆ ಎಂದು ಪ್ರಶ್ನಿಸಿದರು.
ಸಿಎಂ ಅವರು ನಮ್ಮನೆಯ ಯಜಮಾನ ಇದ್ದಹಾಗೆ ಅವರು ನನ್ನ ಜೊತೆ ಮಾತನಾಡೋದು ಎನು ತಪ್ಪಾ ಎಂದು ಪ್ರಶ್ನಿಸಿದ ಲಕ್ಷ್ಮಣ ಸವದಿ ನಾನು ಪಕ್ಷ ಬಿಡ್ತಿನಿ ಎಂದಾದರೆ ಅವರು ಎನಾದ್ರು ಹೇಳೊಕೆ ಸಾಧ್ಯ ಎಂದರು. ಇನ್ನು ಇತ್ತಿಚೆಗೆ ಡಿಕೆಶಿ ಭೇಟಿ ಮಾಡಿ ಮಾತುಕತೆ ಮಾಡಿದ್ದಕ್ಕೆ ನಮ್ಮ ಕ್ಷೇತ್ರದಲ್ಲಿ ಒಂದು ನೀರಾವರಿ ಯೋಜನೆ ಮಂಜೂರಾಗಿದೆ. ಅದರ ಟೆಂಡರ್ ಪ್ರಕ್ರಿಯೆ ಆಗಿದೆ ಅದನ್ನು ಭೂಮಿ ಪೂಜೆ ಮಾಡಿ ಚಾಲನೆ ನೀಡಿ ಎಂದು ಹೇಳೊಕೆ ಹೋಗಿದ್ದೆ. ಹೀಗಾಗಿ ಡಿಕೆಶಿಗೆ ಭೇಟಿಯಾಗಿ ಮಾತಾಡಿದ್ದೆನೆ ಅಷ್ಟೇ ಎಂದರು.
ನನ್ನ ಹಣೆಬರಹದಲ್ಲಿ ಏನೇನಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ ಎಂದ ಲಕ್ಷ್ಮಣ ಸವದಿ, ಅಲ್ಲಿ ಡಿಸಿಎಂ ಆಗಿದ್ರು ಇಲ್ಲೂ ಸಹ ಡಿಸಿಎಂ ಆಗ್ತಿರಿ ಎಂಬ ಮಾಧ್ಯಮಗಳ ಪ್ರಶ್ನೆಗೆ ನೋಡೊಣ ಮುಂದೆ ಕಾಲ ಇದೆ ನಾವು ಇರ್ತಿವಿ ನೀವು ಇರ್ತಿರಿ ಎಂದರು.


