
Video : ನೂತನವಾಗಿ ಪ್ರಾರಂಭವಾದ ಕುಡುಕರ ಸಂಘ – ಇವರ ಬೇಡಿಕೆ ಏನು…?

ಹಾಸನ : ನಮ್ಮ ದೇಶದಲ್ಲಿ ನಾನಾ ಬಗೆಯ ಸಂಘಟನೆಗಳು ಸಾವಿರಾರು ಇವೆ. ಆದರೆ ಇಲ್ಲೊಂದು ಹೊಸ ರೂಪದ ಅಪರೂಪ ಸಂಘಟನೆ ಹುಟ್ಟಿಕೊಂಡಿದ್ದು ಕರ್ನಾಟಕ ಮದ್ಯಪಾನ ಪ್ರೀಯರ ಹೋರಾಟ ಸಂಘ ಅಸ್ತಿತ್ವಕ್ಕೆ ಬಂದಿದೆ.
ಹಾಸನದಲ್ಲಿ ಹುಟ್ಟಿಕೊಂಡ ಸಂಘದ ಅಧ್ಯಕ್ಷರಾಗಿ ವೆಂಕಟೇಶ ಅವರು ಆಯ್ಕೆಯಾಗಿದ್ದು ನಿನ್ನೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮುಂಬರುವ ಹೋರಾಟದ ಕುರಿತು ಮಾಹಿತಿ ನೀಡಿದ್ದಾರೆ. ಮದ್ಯ ಕುಡಿಯುವವರನ್ನು ಯಾರೂ ಕೂಡ ಕುಡುಕರು ಎನ್ನಬಾರದು. ಮದ್ಯಪ್ರಿಯರು ಎಂದು ಕರೆಯಬೇಕು. ಮದ್ಯಪಾನ ಪ್ರಿಯರಿಗೆ 1 ಲಕ್ಷ ಇನ್ಷೂರೆನ್ಸ್ ಸೌಲಭ್ಯ ಒದಗಿಸಬೇಕು. ಮದ್ಯ ಕುಡಿದು ಸಾವನ್ನಪ್ಪಿದರೆ ಆ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮದ್ಯಪ್ರಿಯರಿಗೆ ಎರಡು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಬೇಕು. ಕುಡಿದು ಹೆಚ್ಚಾಗಿ ಬಾರ್‌ನಲ್ಲಿ ಮಲಗಿದರೆ ಅವರನ್ನು ಆಚೆ ಕಳುಹಿಸಬಾರದು. ನಾಲ್ಕು ಗಂಟೆ ಅಲ್ಲೇ ವಿಶ್ರಾಂತಿ ಪಡೆಯಲು ವೈನ್ ಸ್ಟೋರ್‌ಗಳಲ್ಲಿ ಬೆಡ್ ವ್ಯವಸ್ಥೆ ಕಲ್ಪಿಸಿಕೊಡಬೇಕು. ಮದ್ಯಪಾನ ನಿಗಮ ಮಂಡಳಿ ರಚಿಸಬೇಕು. ಮದ್ಯಪಾನ ಪ್ರಿಯರಿಗೆ ನಿವೇಶನ ನೀಡುವುದು ಸೇರಿದಂತೆ ಹದಿನೆಂಟು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ.
ಸರ್ಕಾರಕ್ಕೆ ನಮ್ಮಿಂದಲೇ ಶೇ.30 ಆದಾಯ ಬರುತ್ತಿದೆ. ಮದ್ಯ ಪ್ರಿಯರು ಕುಡಿದು ಮನೆಗೆ ಹೋಗಿ ಗಲಾಟೆ ಮಾಡಿದರೆ ಮಕ್ಕಳ ಓದಿಗೆ ತೊಂದರೆ ಆಗುತ್ತದೆ. ಹೀಗಾಗಿ ಕುಡುಕರ ಮಕ್ಕಳಿಗೆ ಹಾಸ್ಟೆಲ್‌ಗಳಲ್ಲಿ ಶೇ.10ರಷ್ಟು ಮೀಸಲಿಡಬೇಕು. ಕುಡಿತದಿಂದ ಎದುರಾಗುವ ಆರೋಗ್ಯ ಸಮಸ್ಯೆ ಹಾಗೂ ಕಿಡ್ನಿ, ಲಿವರ್ ತೊಂದರೆಯಿಂದ ಬಳಲುವವರಿಗೆ ಸರ್ಕಾರವೇ 4ರಿಂದ 5 ಲಕ್ಷ ವೈದ್ಯಕೀಯ ವೆಚ್ಚ ಭರಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಶೀಘ್ರದಲ್ಲಿಯೇ ಅಧಿಕೃತವಾಗಿ ಮದ್ಯಪಾನ ಪ್ರಿಯರ ಹೋರಾಟ ಸಂಘದ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈ ಕಾರ್ಯಕ್ರಮದಲ್ಲಿ ಅಬಕಾರಿ ಸಚಿವರು ಸೇರಿದಂತೆ ಏಳೆಂಟು ಶಾಸಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.