Kudalasangama Swamiji ; ಶ್ರೀಗಳ ವಿರುದ್ಧ ಸುದ್ದಿ ಪ್ರಸಾರಕ್ಕೆ ತಡೆ..! ನ್ಯಾಯಾಲಯ ಆದೇಶ
ಬೆಂಗಳೂರು : ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿಗಳಾದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರ (Kudalasangama Swamiji) ವಿರುದ್ಧ ಯಾವುದೇ ರೀತಿಯ ಮಾನಹಾನಿಕರ ಲೇಖನ ಅಥವಾ ದೃಶ್ಯಾವಳಿಗಳನ್ನು ಪ್ರಸಾರ ಮಾಡದಂತೆ ಬೆಂಗಳೂರಿನ 30ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ (Temporary Injunction) ನೀಡಿದೆ.
ವ್ಯಕ್ತಿತ್ವಕ್ಕೆ ಧಕ್ಕೆ ತರುವ ಸಂಚು
ವ್ಯಕ್ತಿತ್ವಕ್ಕೆ ಧಕ್ಕೆ ತರುವ ಸಂಚು : ಶ್ರೀಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ನಲ್ಲಿ, ತಾವು ಒಂದು ಗೌರವಾನ್ವಿತ ಸಮುದಾಯದ ಆಧ್ಯಾತ್ಮಿಕ ಗುರುಗಳಾಗಿದ್ದು, ಸಮಾಜದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಆದರೆ ಕೆಲವು ಮಾಧ್ಯಮಗಳು
ಮತ್ತು ವ್ಯಕ್ತಿಗಳು ತಮ್ಮ ಪವಿತ್ರ ಸ್ಥಾನಕ್ಕೆ ಚ್ಯುತಿ ತರುವ ಉದ್ದೇಶದಿಂದ ಯಾವುದೇ ಆಧಾರವಿಲ್ಲದ, ಕಪೋಲಕಲ್ಪಿತ ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ದೂರಿದ್ದಾರೆ. ವಿಶೇಷವಾಗಿ, ತಮ್ಮ ನಡವಳಿಕೆಯ ಬಗ್ಗೆ ತಪ್ಪು ಅರ್ಥ ಬರುವಂತೆ ಬಿಂಬಿಸಿರುವುದು ಭಕ್ತಾದಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ ಎಂದು ಅವರು ವಾದಿಸಿದ್ದಾರೆ.
ನ್ಯಾಯಾಲಯದ ಗಮನಕ್ಕೆ ತಂದ ಪ್ರಮುಖ ಅಂಶಗಳು:
ಪರೋಕ್ಷ ಆರೋಪ : ವರದಿಗಳಲ್ಲಿ ಹೆಸರನ್ನು ನೇರವಾಗಿ ಬಳಸದಿದ್ದರೂ, ಶ್ರೀಗಳನ್ನು ಗುರುತಿಸುವಂತಹ ಕುರುಹುಗಳನ್ನು ನೀಡಿ ಪರೋಕ್ಷವಾಗಿ ಆರೋಪ ಮಾಡಲಾಗಿದೆ. ಇದು ಅವರ ಘನತೆಗೆ ಹಾನಿ ಮಾಡುವ ಉದ್ದೇಶಪೂರ್ವಕ ಪ್ರಯತ್ನ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗಿದೆ.
ಸತ್ಯಾಸತ್ಯತೆ ಕೊರತೆ : ಯಾವುದೇ ವಿಷಯವನ್ನು ಪ್ರಕಟಿಸುವ ಮುನ್ನ ಸಂಬಂಧಪಟ್ಟವರಿಂದ ದೃಢೀಕರಣ ಪಡೆಯುವುದು ಮಾಧ್ಯಮಗಳ ಕನಿಷ್ಠ ಜವಾಬ್ದಾರಿ. ಆದರೆ ಈ ಪ್ರಕರಣದಲ್ಲಿ ಅಂತಹ ಯಾವುದೇ ಪ್ರಯತ್ನ ನಡೆದಿಲ್ಲ ಎಂದು ಶ್ರೀಗಳ ಪರ ವಕೀಲರು ವಾದ ಮಂಡಿಸಿದ್ದಾರೆ.
ಏನಿದು ಪ್ರಕರಣ : ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಸತ್ಯಾಸತ್ಯತೆ ಪರಿಶೀಲಿಸದೆ ವರದಿಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಶ್ರೀಗಳು (Kudalasangama Swamiji) ನ್ಯಾಯಾಲಯದ ಮೊರೆ ಹೋಗಿದ್ದರು.
ತಾವೊಬ್ಬರು ಜವಾಬ್ದಾರಿಯುತ ಪೀಠಾಧಿಪತಿಯಾಗಿದ್ದು, ಒಂದು ದೊಡ್ಡ ಸಮುದಾಯದ ಆಧ್ಯಾತ್ಮಿಕ ಗುರುಗಳಾಗಿದ್ದಾರೆ. ಇಂತಹ ಸ್ಥಾನದಲ್ಲಿರುವಾಗ ತಮ್ಮ ನಡವಳಿಕೆಯ ಬಗ್ಗೆ ‘ಅನೈತಿಕ ಮತ್ತು ಅಕ್ರಮ’ ಎಂಬ ಪದಗಳನ್ನು ಬಳಸಿ ವರದಿ ಮಾಡಿರುವುದು ತಮ್ಮ ಗೌರವಕ್ಕೆ ಧಕ್ಕೆ ತಂದಿದೆ ಎಂದು ಶ್ರೀಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಹೆಸರು ಹೇಳದಿದ್ದರೂ ಪರೋಕ್ಷ ಆರೋಪ! ವಿಶೇಷವೆಂದರೆ, ಈ ವರದಿಗಳಲ್ಲಿ ಶ್ರೀಗಳ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಪರೋಕ್ಷವಾಗಿ ಅವರನ್ನೇ ಗುರಿಯಾಗಿಸಿ ಆರೋಪಗಳನ್ನು ಮಾಡಲಾಗಿದೆ. ಇದು ಸಾರ್ವಜನಿಕರಲ್ಲಿ ತಪ್ಪು ಸಂದೇಶ ರವಾನಿಸಲು ಮಾಡಿದ ಸಂಚು ಎಂದು ಸ್ವಾಮೀಜಿಯವರು ಅಫಿಡವಿಟ್ನಲ್ಲಿ ಉಲ್ಲೇಖಿಸಿದ್ದರು. ಈ ವಾದವನ್ನು ಆಲಿಸಿದ ನ್ಯಾಯಾಲಯವು, ಮೇಲ್ನೋಟಕ್ಕೆ ಶ್ರೀಗಳ ಗೌರವಕ್ಕೆ ಹಾನಿಯಾಗುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಈ ಮಹತ್ವದ ಆದೇಶ ಹೊರಡಿಸಿದೆ.
ಕೋರ್ಟ್ ಆದೇಶದಲ್ಲಿ ಏನಿದೆ?
ಮುಂದಿನ ವಿಚಾರಣೆಯ ದಿನಾಂಕವಾದ ಏಪ್ರಿಲ್ 27, 2026 ರವರೆಗೆ ಶ್ರೀಗಳ ವಿರುದ್ಧ ಯಾವುದೇ ರೀತಿಯ ಅವಹೇಳನಕಾರಿ ಸುದ್ದಿಗಳನ್ನು ಪ್ರಕಟಿಸುವುದು, ಹಂಚುವುದು ಅಥವಾ ಪ್ರಸಾರ ಮಾಡುವುದನ್ನು ಪ್ರತಿವಾದಿಗಳಿಗೆ ನಿರ್ಬಂಧಿಸಲಾಗಿದೆ. ಒಂದು ವೇಳೆ ನ್ಯಾಯಾಲಯದ ಈ ಆದೇಶವನ್ನು ಉಲ್ಲಂಘಿಸಿ ಸುದ್ದಿ ಪ್ರಸಾರ ಮುಂದುವರಿಸಿದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ತಿಳಿಸಲಾಗಿದೆ.



