
ಮದ್ಯ ಮಳಿಗೆ ಸ್ಥಳಾಂತರಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ

ಚನ್ನಮ್ಮನ ಕಿತ್ತೂರು : ಇಲ್ಲಿಯ ಸೋಮವಾರ ಪೇಟೆಯ ಬೆಲ್ಲದ ಓಣಿಯಲ್ಲಿರುವ ಎಂ ಎಸ್ ಆಯ್ ಎಲ್ ಮದ್ಯದ ಮಳಿಗೆಯನ್ನು ಬೇರೆ ಕಡೆ ಸ್ಥಳಾಂತರಿಸಬೇಕೆಂದು ಒತಾಯಿಸಿ ಮಹಿಳೆಯರು ಮದ್ಯದ ಮಳಿಗೆ ಮುಂದೆ ಅನಿರ್ಧಿಷ್ಟ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ಸೊಮವಾರ ಪೇಟೆಯ ಚನ್ನಮ್ಮನ ವೃತ್ತದ ಪಕ್ಕದಲ್ಲಿರುವ
ಮದ್ಯದ ಮಳಿಗೆ ಪ್ರತಿ ದಿನ ನೂರಾರು ಗ್ರಾಹಕರು ಬರುತ್ತಾರೆ. ಮದ್ಯದ ಮಳಿಗೆಯಲ್ಲಿ ಮದ್ಯದ ಪಾಕೆಟ್ ತೆಗೆದುಕೊಂಡು ಅಕ್ಕ ಪಕ್ಕದ ಮನೆಗಳಿಗೆ ಹೋಗಿ ರಾತ್ರಿ ಬಾಗಿಲು ಬಡೆದು ಮದ್ಯ ಸೇವನೆ ಮಾಡಲು ನೀರು ಕೇಳುತ್ತಾರೆ.
ನೀರು ಕೊಡದಿದ್ದರೆ ಜಗಳಕ್ಕೆ ಬರುತ್ತಾರೆ. ಮನೆಯ ಕಟ್ಟಿಯ ಮೇಲೆ ಕುಳಿತು ಮದ್ಯ ಸೇವನೆ ಮಾಡಿ, ಮನೆಯ ಬಾಗಿಲ ಮುಂದೆ ವಾಂತಿ ಮಾಡುತ್ತಾರೆ. ಇದರಿಂದ ನೂರಾರು ಕುಟುಂಬಗಳು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಪ್ರತಿಭಟನೆ ಮಾಡುತ್ತಿರುವ ಮಹಿಳೆಯರು ಮಹಾದೇವಿ ಹಿರೇಮಠ ಆರೋಪಿಸಿದರು.
ಈ ಕುರಿತು ಇಲ್ಲಿಯ ನಿವಾಸಿಗಳು ದಶಕಗಳಿಂದ ಹೋರಾಟ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳಿಗೆ, ತಾಲೂಕು ಆಡಳಿತಕ್ಕೆ, ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ ಇನ್ನೂವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

ಮದ್ಯದ ಮಳಿಗೆಯನ್ನು ಸ್ಥಳಾಂತರ ಮಾಡುವವರೆಗೆ ಅನಿರ್ದಿಷ್ಟ ಅಹೋರಾತ್ರಿ ಹೋರಾಟವನ್ನು ನಡೆಸುತ್ತವೆ. ಸ್ಥಳಾಂತರ ವಿಳಂಬವಾದರೆ ಅಧಿವೇಶನದ ಸಮಯದಲ್ಲಿ ಚನ್ನಮ್ಮನ ವೃತ್ತದ ಹತ್ತಿರ ಇರುವ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಉಗ್ರ ಹೋರಾಟ ಮಾಡುತ್ತೇವೆ. ಅಲ್ಲದೇ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುತ್ತವೆ ಎಂದು ಇಲ್ಲಿಯ ನಿವಾಸಿಗಳು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆ ಸ್ಥಳಕ್ಕೆ ಅಬಕಾರಿ ಸಿಪಿಐ ಶ್ರೀಶೈಲ ಅಕ್ಕಿ, ಕಿತ್ತೂರು ಪಿಎಸ್ಐ ಪ್ರವೀಣ ಗಂಗೊಳ ದೌಡಾಯಿಸಿ ಪ್ರತಿಭಟನೆಗಾರ ಮನವೊಲಿಸಲು ಪ್ರಯತ್ನಿಸಿದರು. ಅವರ ಮನವೊಲಿಕೆಗೆ ಮಣಿಯದ ಮಹಿಳೆಯರು ಮದ್ಯದ ಮಳಿಗೆ ಸ್ಥಳಾಂತರ ಆಗುವವರೆಗೆ ಯಾವುದೇ ಕಾರಣಕ್ಕೂ ನಮ್ಮ ಹೋರಾಟ ಬಿಡುವುದಿಲ್ಲ. ಮದ್ಯದ ಮಳಿಗೆಗೆ ನಾಗರಿಕರು ಸೇರಿ ಬೀಗ ಹಾಕುತ್ತೇವೆ ಎಂದು ಆಕ್ರೋಶ ಹೊರ ಹಾಕಿದರು.
ನೀಲವ್ವ ತಿಮ್ಮಾಪೂರ, ಮಹಾದೇವಿ ಹಾಲ್ಮಠ, ಅನ್ನಪೂರ್ಣಾ ಪಾಟೀಲ, ರೇಖಾ ಕಾಜಗಾರ, ದೀಪಾ ಸರದಾರ, ಕಸ್ತೂರಿ ತಿಮ್ಮಾಪೂರ, ಗೌರವ್ವ ಅಂಗಡಿ, ನಿರ್ಮಲಾ ಪಾಟೀಲ, ಕಾವ್ಯಾ ಹಿರೇಮಠ, ಕಸ್ತೂರಿ ತಿಮ್ಮಾಪೂರ, ಮಹಾದೇವಿ ಪಾಟೀಲ, ಗೌರವ್ವ ಹಾಲ್ಮಠ, ಶ್ರೀಕಾಂತವ್ವ ಅಂಗಡಿ, ಸುಮಂಗಲಾ ಹೊಸೂರ, ಪ್ರವೀಣ ಸರ್ದಾರ, ರಾಜುಗೌಡ ಪಾಟೀಲ, ಮಲ್ಲಿಕಾರ್ಜುನ ಸಾಣಿಕೊಪ್ಪ, ಮಹೇಶ ಹೊಸೂರ, ಚನ್ನಯ್ಯಾ ಹಾಲ್ಮಠ, ಜಾವಿದ್ ಅತ್ತಾರ, ಸುನೀಲ ಪಾಟಿಲ ಹಾಗೂ ಅನೇಕರು ಇದ್ದರು
ಕಳೆದ ನಾಲ್ಕು ದಿನಗಳಿಂದ ಇಲ್ಲಿ 4 ಮನೆಗಳಿಗೆ ಕಳ್ಳರು ನುಗ್ಗಿ ಮನೆಯಲ್ಲಿನ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿ ಅವುಗಳನ್ನು ಮಾರಾಟ ಮಾಡಿ ಮದ್ಯ ಸೇವನೆ ಮಾಡುತ್ತಿದ್ದಾರೆ. ರಾತ್ರಿ 11 ಗಂಟೆ ಸುಮಾರಿಗೆ ಸೋಮವಾರ ಪೇಟೆಯಲ್ಲಿ ಯುವಕರು ಮಾದಕ ವಸ್ತುಗಳನ್ನು ಸೇವನೆ ಮಾಡಿ
ಬೀದಿಯಲ್ಲಿ ಸಂಚರಿಸುತ್ತಿರುವ ಜನರಿಗೆ ತೊಂದರೆ ನೀಡುತ್ತಾರೆ. 9 ವರ್ಷದ ಚಿಕ್ಕ ಮಕ್ಕಳು ಸಹ ಇಲ್ಲಿ ದುಷ್ಟಚಟಕ್ಕೆ ಬಲಿ ಆಗುತ್ತಿದ್ದಾರೆ. ಇಷ್ಟೆಲ್ಲಾ ಆಕ್ರಮ ಚಟುವಟಿಕೆಗಳು ನಡೆದರು. ಯಾವುದೇ ಪೊಲಿಸ್ ರು ಈ ಕಡೆ ಗಸ್ತು ಕೂಡಾ ತಿರುಗುವುದಿಲ್ಲ ಎಂದು ಮಹಿಳೆಯರು ಆರೋಪಿಸಿದರು.