
ಕಿತ್ತೂರು ಉತ್ಸವ : ಮಾಧ್ಯಮ ಸಮನ್ವಯ ಸಮಿತಿ ಸಭೆಗೆ ಪತ್ರಕರ್ತರ ಬಹಿಷ್ಕಾರ

ಚನ್ನಮ್ಮನ ಕಿತ್ತೂರು : ಐತಿಹಾಸಿಕ ಕಿತ್ತೂರು ಉತ್ಸವದ ಮಾಧ್ಯಮ ಸಮನ್ವಯ ಸಮಿತಿಯಲ್ಲಿ ಸ್ಥಳೀಯ ಪತ್ರಕರ್ತರನ್ನು ಕಡೆಗಣಿಸಿದ ಹಿನ್ನಲೆಯಲ್ಲಿ ನಾಳೆ ನಡೆಯಬೇಕಿದ್ದ ಮಾಧ್ಯಮ ಸಮಿತಿ ಸಭೆಗೆ ಸ್ಥಳೀಯ ಪತ್ರಕರ್ತರು ಬಹಿಷ್ಕಾರ ಹಾಕಿದ್ದಾರೆ.
ಅ. 23 ರಿಂದ 3 ದಿನಗಳ ಕಾಲ ಚನ್ನಮ್ಮನ ಕಿತ್ತೂರಿನಲ್ಲಿ ನಡೆಯುತ್ತಿರುವ ಐತಿಹಾಸಿಕ ಚನ್ನಮ್ಮನ ಕಿತ್ತೂರು ಉತ್ಸವದ ಯಶಸ್ಸಿಗಾಗಿ ಬೆಳಗಾವಿ ಜಿಲ್ಲಾಡಳಿತ 20 ಉಪ ಸಮಿತಿಗಳನ್ನು ರಚನೆ ಮಾಡಿದೆ. ಅದರಲ್ಲಿ ಮಾಧ್ಯಮ ಸಮನ್ವಯ ಸಮಿತಿ ಕೂಡಾ ಒಂದಾಗಿದೆ.
ಈ ಉಪಸಮಿತಿ ಅಧ್ಯಕ್ಷರನ್ನಾಗಿ ವಾರ್ತಾ ಇಲಾಖೆ ಉಪ ನಿರ್ದೇಶಕರು ಇರುತ್ತಾರೆ. ಆದರೆ, ಮಾಧ್ಯಮ ಸಮನ್ವಯ ಸಮಿತಿಯಲ್ಲಿ ಸ್ಥಳೀಯ ಕೆಲವು ಮಾಧ್ಯಮ ಪ್ರತಿನಿಧಿಗಳನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲಾಧಿಕಾರಿಗಳು ಕಿತ್ತೂರು ಉತ್ಸವ ಪೂರ್ವಭಾವಿ ಸಭೆಯಲ್ಲಿ ರಾಜ್ಯ ಮಟ್ಟದ ಕಿತ್ತೂರು ಉತ್ಸವವನ್ನು ವಿಶ್ವ ಮಟ್ಟದಲ್ಲಿ ಪ್ರಚಾರ ಸಿಗುವ ಹಾಗೆ ಮಾಡಲಾಗುತ್ತದೆ ಎಂದು ವಾಗ್ದಾನ ಮಾಡಿದ್ದರು. ಆದರೆ ಜಿಲ್ಲಾ ಮಟ್ಟದ ಮಾಧ್ಯಮ ಪ್ರತಿನಿಧಿಗಳನ್ನು ಕೂಡ ಈ ಸಮಿತಿಯಲ್ಲಿ ಕಡೆಗಣಿಸಲಾಗಿದೆ.
ಹೀಗಾದರೆ ರಾಜ್ಯ ಮಟ್ಟದಲ್ಲಿ ಪ್ರಚಾರ ಸಿಗುವುದಾದರೂ ಹೇಗೆಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.
ಅಧಿಕಾರಿಗಳು ಮಾಡಿದ ಈ ಎಡವಟ್ಟನ್ನು ತಕ್ಷಣ ಸರಿಪಡಿಸಬೇಕು. ಮಾಧ್ಯಮ ಸಮನ್ವಯ ಸಮಿತಿಯಲ್ಲಿ ಕೇವಲ ಮಾಧ್ಯಮದವರು ಮಾತ್ರ ಇರಬೇಕು.
ಶನಿವಾರ (ಅ.05) ರಂದು ನಡೆಯಬೇಕಾದ ಮಾಧ್ಯಮ ಸಮನ್ವಯ ಸಮಿತಿ ಸಭೆಗೆ ಸ್ಥಳೀಯ ಪತ್ರಕರ್ತರು ಬಹಿಷ್ಕಾರ ಹಾಕಿದ್ದಾರೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಈರಣ್ಣ ಬಣಜಗಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.