
ಕೇರಳ ಗುಡ್ಡ ಕುಸಿತ : ಮೃತರ ಸಂಖ್ಯೆ 60 ಕ್ಕೆ ಏರಿಕೆ

ವಯನಾಡ್: ಕೇರಳದ ವಯನಾಡ್ ಜಿಲ್ಲೆಯಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಮಕ್ಕಳು ಸೇರಿದಂತೆ ಮೃತಪಟ್ಟವರ ಸಂಖ್ಯೆ 66ಕ್ಕೆ ಏರಿಕೆಯಾಗಿದೆ. ಹಲವು ಕುಟುಂಬಗಳು ಜಲಸಮಾಧಿಯಾಗಿವೆ.
ಕನಿಷ್ಠ 400ಕ್ಕೂ ಹೆಚ್ಚು ಕುಟುಂಬಗಳು ದುರಂತದಲ್ಲಿ ಸಿಲುಕಿವೆ ಎಂದು ಹೇಳಲಾಗುತ್ತದೆ. ಇಂದು ನಸುಕಿನ ಜಾವ ಭೂಕುಸಿತ ಸಂಭವಿಸಿದ್ದು, ಮನೆಗಳು ಮತ್ತು ಕುಟುಂಬಗಳು ಕೊಚ್ಚಿಕೊಂಡು ಹೋಗಿವೆ.
ಮುಂಡಕ್ಕೈ, ಚೂರಲ್ಮಾಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೋತುಕಲ್ ಗ್ರಾಮದ ಬಳಿಯ ನದಿಯ ದಡದಿಂದ ಐದು ವರ್ಷದ ಮಗು ಸೇರಿದಂತೆ ಮೂರು ಶವಗಳನ್ನು ಹೊರತೆಗೆಯಲಾಗಿದೆ. ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಭೂಕುಸಿತದಿಂದ ಹಾನಿಗೊಳಗಾಗಿ ಸಂಪರ್ಕ ಕಡಿತಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕುಸಿತ ಪ್ರದೇಶಗಳಲ್ಲಿ ವಿಪತ್ತು ಪರಿಹಾರ ಕಾರ್ಯ ಪ್ರಗತಿಯಲ್ಲಿದೆ. ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಪೊಲೀಸ್ ಮತ್ತು ಅರಣ್ಯ, ಕಂದಾಯ ಮತ್ತು ಸ್ಥಳೀಯ ಸ್ವ-ಸರ್ಕಾರ ಇಲಾಖೆಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವಯನಾಡ್ ಜಿಲ್ಲಾಧಿಕಾರಿ ಮೇಘಶ್ರೀ ಡಿ ಆರ್ ಹೇಳಿದ್ದಾರೆ.
ಸರ್ಕಾರಿ ಸಂಸ್ಥೆಗಳ ಜೊತೆಗೆ ಸ್ವಯಂಸೇವಕರು ಮತ್ತು ಸ್ಥಳೀಯ ನಿವಾಸಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಕರಿಸುತ್ತಿದ್ದಾರೆ. ಕರಮಂತೋಡು ನದಿಯ ಬಾಣಾಸುರ ಸಾಗರ ಅಣೆಕಟ್ಟಿನ ಶೆಟರ್ ನ್ನು ತೆರೆಯಲಾಗಿದ್ದು, ಕೆಳಭಾಗ ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವವರಿಗೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.