ಅರಿವಳಿಕೆ ನೀಡಿದ ನಂತರ ಪ್ರಜ್ಞೆ ತಪ್ಪಿದ 18 ತಿಂಗಳ ಬಾಲಕ ಮೃತಪಟ್ಟ ಘಟನೆ ಕೇರಳಂನ ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಕುಟುಂಬವು ವೈದ್ಯಕೀಯ ನಿರ್ಲಕ್ಷ್ಯದ ಆರೋಪದ ಹೊರಿಸಿದ್ದು, ಪೊಲೀಸರು ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತುಟಿಗೆ ಗಾಯ ಮಾಡಿಕೊಂಡಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೊಲಿಗೆ ಹಾಕಲು ಅರಿವಳಿಕೆ ನೀಡಿದ ನಂತರ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಕಣ್ಣೂರಿನ ಎರಾಮಮ್-ಕುತ್ತೂರು ನಿವಾಸಿ ಟಿ. ಸೂರಜ್ ಮತ್ತು ವಿಜಿಶಾ ದಂಪತಿಯ ಏಕೈಕ ಪುತ್ರ ದೇವಾಂಶ್ ಶೌರ್ಯ ಜುಲೈ 5ರಂದು ಮನೆಯ ಹೊರಗೆ ಆಟವಾಡುತ್ತಿದ್ದಾಗ ಬಿದ್ದು ತುಟಿಗೆ ಗಾಯವಾಗಿತ್ತು. ಮೊದಲು ಮಗುವನ್ನು ಮಠಮಂಗಲಂನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು.
ನಂತರ ಪಯ್ಯನ್ನೂರಿನ ಬೇಬಿ ಮೆಮೋರಿಯಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಮಗುವಿಗೆ ಅರಿವಳಿಕೆ ನೀಡಿ ಗಾಯಕ್ಕೆ ಹೊಲಿಗೆ ಹಾಕಲಾಯಿತು. ನಂತರ ಬಾಲಕ ಪ್ರಜ್ಞೆ ಕಳೆದುಕೊಂಡನು ಎಂದು ಹೇಳಲಾಗಿದೆ. ಬಳಿಕ ಮಗು ಶೌರ್ಯನನ್ನು ಕಣ್ಣೂರಿನ ಬೇಬಿ ಮೆಮೋರಿಯಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಶುಕ್ರವಾರ (ಜು.10) ರಾತ್ರಿ 9 ಗಂಟೆ ಸುಮಾರಿಗೆ ಮೃತಪಟ್ಟಿದ್ದಾನೆ. ಅಚ್ಚರಿ ಎಂದರೆ ಟಿ. ಸೂರಜ್ ಮತ್ತು ವಿಜಿಶಾ ದಂಪತಿ ಮದುವೆಯಾಗಿ 8 ವರ್ಷಗಳ ಬಳಿಕ ಜನಿಸಿದ ಮಗು ದೇವಾಂಶ್ ಶೌರ್ಯ. ಏಕೈಕ ಮಗನನ್ನು ಕಳೆದುಕೊಂಡು ಕುಟುಂಬ ಇದೀಗ ಕಂಗಾಲಾಗಿದೆ.
ವೈದ್ಯೆ ಅಂಜಲಿ ಪೊದುವಾಲ್ ವಿರುದ್ಧ ವೈದ್ಯಕೀಯ ನಿರ್ಲಕ್ಷ್ಯದ ಆರೋಪವನ್ನು ಕುಟುಂಬವು ಹೊರಿಸಿದ್ದು, ಅವರ ಮೇಲೆ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 125ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಕೃತ್ಯಗಳಿಗೆ ಈ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತಿದ್ದ, ಗರಿಷ್ಠ ಮೂರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.
ಆರೋಪ ನಿರಾಕರಿಸಿದ ಆಸ್ಪತ್ರೆ : ಕೋಯಿಕ್ಕೋಡ್, ಕಣ್ಣೂರು, ತೋಡುಪುಳ, ಪಯ್ಯನೂರು ಮತ್ತು ವಡಕರದಲ್ಲಿ ಶಾಖೆಗಳನ್ನು ಹೊಂದಿರುವ ಬೇಬಿ ಮೆಮೋರಿಯಲ್ ಆಸ್ಪತ್ರೆ, ವೈದ್ಯಕೀಯ ನಿರ್ಲಕ್ಷ್ಯದ ಆರೋಪಗಳನ್ನು ನಿರಾಕರಿಸಿದೆ. ಅರಿವಳಿಕೆ ನೀಡಿದ ತಕ್ಷಣ ಮಗುವಿಗೆ ಅನಿರೀಕ್ಷಿತ ಹೃದಯ ಸ್ತಂಭನ ಸಂಭವಿಸಿದೆ. ತಕ್ಷಣವೇ ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಯಿತು. ನಂತರ ಕಣ್ಣೂರು ಆಸ್ಪತ್ರೆಗೆ ಸುಧಾರಿತ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಯಿತು ಎಂದು ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.
ಸೂಕ್ತ ಡೋಸೇಜ್ ಮತ್ತು ವೈದ್ಯಕೀಯ ಆರೈಕೆಯ ಹೊರತಾಗಿಯೂ ಅರಿವಳಿಕೆ ನಂತರ ತೊಡಕುಗಳು ಉಂಟಾಗಬಹುದು ಎಂದು ಆಸ್ಪತ್ರೆಯು ಸಮರ್ಥಿಸಿಕೊಂಡಿದ್ದು, ಎಲ್ಲ ಅಂಗೀಕೃತ ಚಿಕಿತ್ಸಾ ಶಿಷ್ಟಾಚಾರಗಳನ್ನು ಅನುಸರಿಸಲಾಗಿದೆ ಎಂದು ಹೇಳಿದೆ. ಮಗುವಿನ ಜೀವ ಉಳಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಅದು ಹೇಳಿದೆ.


