ದಿ. ಉಮೇಶ್ ಕತ್ತಿ ನಿವಾಸಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭೇಟಿ, ಕುಟುಂಬದವರಿಗೆ ಸಾಂತ್ವನ
ಹುಕ್ಕೇರಿ : ಇತ್ತಿಚೆಗೆ ಹೃದಯಾಘಾತದಿಂದ ನಿಧನರಾದ ಅರಣ್ಯ ಸಚಿವ ದಿ. ಉಮೇಶ್ ಕತ್ತಿ ನಿವಾಸಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಈಶ್ವರ ಖಂಡ್ರೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಸೋಮವಾರ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ದಿ. ಉಮೇಶ್ ಕತ್ತಿ ನಿವಾಸಕ್ಕೆ ಭೇಟಿ ನೀಡಿದ ಇವರು, ಸಹೋದರ ರಮೇಶ್ ಕತ್ತಿ ಅವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ದಿ. ಉಮೇಶ್ ಕತ್ತಿ ಜೊತೆಗಿನ ಒಡನಾಟ ಹಾಗೂ ಅವರ ನೇರ ವ್ಯಕ್ತಿತ್ವದ ಕುರಿತು ನೆನಪಿಸಿಕೊಂಡರು.
ಉಮೇಶ್ ಕತ್ತಿ ಒಬ್ಬ ಸರಳ ವ್ಯಕ್ತಿತ್ವದ ಮನುಷ್ಯ. ಅಧಿಕಾರದಲ್ಲಿ ಇರಲಿ ಅಥವಾ ಇಲ್ಲದಿರಲಿ ಅವರು ಯಾವತ್ತೂ ಬದಲಾಗಲಿಲ್ಲ. ಎಲ್ಲರ ಜೊತೆಗೆ ಸ್ನೇಹದಿಂದ ಇರುತ್ತಿದ್ದರು. ಯಾವುದೇ ಸಂಕಷ್ಟದ ಪರಿಸ್ಥಿತಿ ಬಂದರು ಹಾಸ್ಯದ ಮೂಲಕ ಅದನ್ನು ತಿಳಿಗೊಳಿಸುವ ಶಕ್ತಿ ಇವರಿಗಿತ್ತು. ಉತ್ತರ ಕರ್ನಾಟಕದ ಗಟ್ಟಿ ಧ್ವನಿ ನಮ್ಮೆಲ್ಲರನ್ನು ಬಿಟ್ಟು ಹೋಗಿದ್ದು ನೋವಿನ ಸಂಗತಿ ಎಂದರು.
ಈ ಸಂದರ್ಭದಲ್ಲಿ ಶಾಸಕ ಗಣೇಶ ಹುಕ್ಕೇರಿ, ಆನಂದ ನ್ಯಾಮಗೌಡ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.