
ವೀರಶೈವ ಧರ್ಮದ ಕಾಶಿ ಜ್ಞಾನ ಪೀಠದಲ್ಲಿ ವಿಶೇಷ ದುರ್ಗಾ ಪೂಜೆಯ ನವರಾತ್ರಿ ಆಚರಣೆ

ವಾರಾಣಾಸಿ (ಉ.ಪ್ರ) : ಮನುಕುಲಕ್ಕೆ ಮಾರಕವಾಗಬಹುದಾದ ಪೈಶಾಚಿಕ ತಾಮಸೀ ಭಾವನೆಗಳಿಂದ ಹೊರಬಂದು ಶ್ರೀಆದಿಶಕ್ತಿ ದುರ್ಗಾಮಾತೆಯ ಪವಿತ್ರ ಸನ್ನಿಧಾನದಲ್ಲಿ ಸತ್ಯ ಶುದ್ಧ ಸಾತ್ವಿಕ ಬದುಕಿನ ಸಂಕಲ್ಪ ಮಾಡುವುದೇ ನವರಾತ್ರಿ ವೃತಾಚರಣೆಯ ಮೂಲ ಉದ್ದೇಶವಾಗಿದೆ ಎಂದು ಕನ್ನಡಿಗರಾಗಿರುವ ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನುಡಿದರು.
ಅವರು ಸೋಮವಾರ ಉತ್ತರಪ್ರದೇಶದ ವಾರಾಣಾಸಿ ನಗರದ ಶ್ರೀಕಾಶಿ ಜ್ಞಾನ ಪೀಠದಲ್ಲಿರುವ ಶ್ರೀಚಕ್ರ ಮತ್ತು ಶ್ರೀಆದಿಶಕ್ತಿ ದುರ್ಗಾಮಾತೆಯ ಸನ್ನಿಧಾನದಲ್ಲಿ ಶರನ್ನವರಾತ್ರಿ ಅಂಗವಾಗಿ 10 ದಿನಗಳ ಘಟ್ಟಸ್ಥಾಪನೆಯ ವಿಶೇಷ ಪೂಜಾ ಕೈಂಕರ್ಯದ ನಿರಂತರ ಜ್ಯೋತಿಯನ್ನು ಬೆಳಗಿಸಿ ಆಶೀರ್ವಚನ ನೀಡಿದರು.
ರಾಕ್ಷಸ ಸಂತತಿಯನ್ನು ನಾಶಗೊಳಿಸಿದ ಶ್ರೀಆದಿಶಕ್ತಿ ದುರ್ಗಾಮಾತೆಯ ಅರ್ಚನೆ, ಆರಾಧನೆ ಮತ್ತು ನಾಮಸ್ಮರಣೆಗೆ ಮೀಸಲಾದ ನವರಾತ್ರಿ ದಸರಾ ಹಬ್ಬದ ಆಚರಣೆಯು ಕೇವಲ ಸಾಂಕೇತಿಕವಾಗದೇ, ಮನುಷ್ಯ ತನ್ನ ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಅತೀ ಅಗತ್ಯವಾದ ಮೌಲ್ಯಗಳ ಚಿಂತನೆ ಮತ್ತು ಅನುಪಾಲನೆಗೆ ತೆರೆದುಕೊಳ್ಳಬೇಕೆಂಬುದೇ ನವರಾತ್ರಿ ಹಬ್ಬದ ಬಹುಮುಖ್ಯ ಆಶಯವಾಗಿದೆ ಎಂದರು.
ಶೈಲಪುತ್ರಿಯ ಆರಾಧನೆ : ನವರಾತ್ರಿಯ ಮೊದಲ ದಿನ ನವದುರ್ಗೆಯರ ಅವತಾರಗಳಲ್ಲಿ ಶೈಲಪುತ್ರಿಯ ಆರಾಧನೆ ನಡೆಯುತ್ತದೆ. ತಪಸ್ಸು, ಶುದ್ಧತೆ ಮತ್ತು ಶಕ್ತಿಯ ಪ್ರತೀಕವಾಗಿರುವ ಶೈಲಪುತ್ರಿಯ ಅರ್ಚನೆ-ಆರಾಧನೆಯಿಂದ ಆತ್ಮಶುದ್ಧಿ, ಶಾಂತಿ, ಸಮೃದ್ಧಿಯ ಜೊತೆಗೆ ಆತ್ಮಸಾಕ್ಷಾತ್ಕಾರ ಪ್ರಾಪ್ತವಾಗುತ್ತದೆ ಎಂದೂ ಅವರು ಹೇಳಿದರು.
ಆಶ್ವೀಜ ಶುದ್ಧ ಪ್ರತಿಪದೆಯ ಘಟಸ್ಥಾಪನೆಯಿಂದ ಮೊದಲ್ಗೊಂಡು ಆಶ್ವೀಜ ಶುದ್ಧ ದಶಮಿಯವರೆಗೆ 10 ದಿನಗಳ ಕಾಲ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಶ್ರೀಆದಿಶಕ್ತಿ ದುರ್ಗಾಮಾತೆಗೆ ಲಲಿತಾ ಸಹಸ್ರನಾಮ ಪಠಣಪೂರ್ವಕ ಕುಂಕುಮಾರ್ಚನೆ ಹಾಗೂ ದುರ್ಗಾಸಪ್ತಶತಿ ಪಾರಾಯಣದ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ. ನಲಿನಿ ಗಂಗಾಧರ ಚಿಲಮೆ, ಶಿವಾನಂದ ಹಿರೇಮಠ, ಗುರುಕುಲದ ವೈದಿಕ ಪ್ರಾಧ್ಯಾಪಕ ಶಿವಮೂರ್ತಿ ಹಿರೇಮಠ, ಪ್ರಭುಸ್ವಾಮಿ ಇತರರು ಇದ್ದರು.