ಸಚಿವ ಕೆ.ಎನ್ ರಾಜಣ್ಣ ರಾಜೀನಾಮೆ ; ಸಂಚಲನ ಮೂಡಿಸಿದ ಪೋಸ್ಟ್…..!
ತುಮಕೂರು : ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಚುನಾವಣೆಯ ನಂತರ ಜಿಲ್ಲಾ ಕಾಂಗ್ರೆಸ್ ಮುಖಂಡರ ಆಂತರಿಕ ಕಿತ್ತಾಟ ಬೀದಿಗೆ ಬಂದಿದ್ದು, ಕಾರ್ಯಕರ್ತರಲ್ಲಿ ಗೊಂದಲ ಮೂಡಿದೆ. ರಾಜ್ಯ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಗುಬ್ಬಿ ಶಾಸಕ ಶ್ರೀನಿವಾಸ್ ಅಭಿಮಾನಿಗಳು ಸಾಮಾಜಿಕ
ಜಾಲತಾಣದಲ್ಲಿ ಸಚಿವರಾದ ಪರಮೇಶ್ವರ್, ಕೆ.ಎನ್. ರಾಜಣ್ಣ (KN Rajanna) ಅವರ ವಿರುದ್ಧ ಪ್ರತಿದಿನ ಪೋಸ್ಟರ್ ಹರಿಬಿಡುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಸಚಿವರ ಅಭಿಮಾನಿಗಳು ಸಹ ಕಾಮೆಂಟ್ ಮಾಡುವ ಮೂಲಕ ಕಿಡಿಕಾರುತ್ತಿದ್ದಾರೆ.
ಎಸ್. ಆರ್. ಶ್ರೀನಿವಾಸ್ ಗುಬ್ಬಿ ಎಂಎಲ್ಎ ಎಫ್.ಸಿ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಶ್ರೀನಿವಾಸ್ ಅಭಿಮಾನಿಗಳು ಶೀಘ್ರದಲ್ಲಿಯೇ ಸಚಿವ ಕೆ ಎನ್ ರಾಜಣ್ಣ ರಾಜೀನಾಮೆ ನೀಡಲಿದ್ದಾರೆ ಎಂಬ ಪೋಸ್ಟ್ ಹರಿಬಿಟ್ಟಿದ್ದು, ಇದಕ್ಕೆ ಸಚಿವ ರಾಜಣ್ಣ ಅವರ ಅಭಿಮಾನಿಗಳು ಈ ಪೋಸ್ಟ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ಪರಮೇಶ್ವರ್ ವಿರುದ್ಧವೂ ಪೋಸ್ಟ್
ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ಅವರ ವಿರುದ್ಧವು ಶಾಸಕ ಶ್ರೀನಿವಾಸ್ ಬೆಂಬಲಿಗರು ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಪ್ರತಿಯೊಂದು ಪೋಸ್ಟ್‌ಗೆ ಸಚಿವ ಪರಮೇಶ್ವರ್ ಬೆಂಬಲಿಗರು ಪ್ರತಿಕ್ರಿಯೆ ನೀಡುತ್ತಿದ್ದು, ಶಾಸಕ ಶ್ರೀನಿವಾಸ್ ಬೆಂಬಲಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


