ಬೇಡಜಂಗಮ ಹೋರಾಟಕ್ಕೆ ಕಿತ್ತೂರು ಕಲ್ಮಠದ ರಾಜಗುರುಗಳ ಬೆಂಬಲ
ಬೆಂಗಳೂರು : ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಬೇಡ ಜಂಗಮರ ಸತ್ಯ ಪ್ರತಿಪಾದನಾ ಸತ್ಯಾಗ್ರಹದ ಹೋರಾಟಕ್ಕೆ ಕಿತ್ತೂರು ಕಲ್ಮಠದ ರಾಜಗುರು ಶ್ರೀ ಮಡಿವಾಳ ರಾಜಯೋಗೇಂದ್ರ ಸ್ವಾಮೀಜಿ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಿತ್ತೂರಿನ ರಾಜಗುರು ಶ್ರೀ ಮಡಿವಾಳ ರಾಜಯೋಗೇಂದ್ರ ಸ್ವಾಮೀಜಿ, ಬೇಡ ಜಂಗಮರಿಗೆ ಸಿಗಬೇಕಾದ ಸವಲತ್ತನ್ನು ಸರಕಾರ ಶೀಘ್ರದಲ್ಲಿಯೇ ನೀಡಬೇಕು. ಈಗಾಗಲೇ ಕಾನೂನಿನ ಪ್ರಕಾರ ಬೇಡ ಜಂಗಮ ಎಂದು ಇದೆ. ಇದರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರ ಗಮನ ಹರಿಸಿದರೆ ಒಳ್ಳೆಯದಾಗುತ್ತದೆ. ಆದಷ್ಟು ಬೇಗ ಸರಕಾರ ಬೇಡ ಜಂಗಮರಿಗೆ ಸಿಹಿ ಸುದ್ದಿ ನೀಡಬೇಕೆಂದು ಒತ್ತಾಯಿಸಿದರು.
ಹೋರಾಟದ ನೇತೃತ್ವ ವಹಿಸಿಕೊಂಡಿರುವ ಬಿ.ಡಿ.ಹಿರೇಮಠ ಅವರು ಮಾತನಾಡಿ, ಬೇಡ ಜಂಗಮರು ಇವತ್ತಿನವರೆಗೂ ಎಲ್ಲಾ ಸಮುದಾಯದವರ ಸೇವೆಯನ್ನು ಮಾಡುತ್ತಾ ಬಂದಿದ್ದೇವೆ. ಬೇಡ ಜಂಗಮರ ಸವಲತ್ತಿಗಾಗಿ ಎಲ್ಲ ಸಮುದಾಯದವರು ಬೆಂಬಲಿಸುವ ಅಗತ್ಯ ಇದೆ ಎಂದರು.
ವೀರುಪಾಕ್ಷಯ್ಯ ನಿರಲಗಿಮಠ ಮಾತನಾಡಿ, ಕೇವಲ ಕಿತ್ತೂರಿನ ಕ್ಷೇತ್ರದಲ್ಲಿಯೇ 45 ಸಾವಿರ ಜನ ಜಂಗಮರಿದ್ದಾರೆ. ಆದ್ದರಿಂದ ಇಲ್ಲಿನ ಶಾಸಕರು ಬೇಡಜಂಗಮರ ಹೋರಾಟಕ್ಕೆ ಸ್ಪಂದಿಸಬೇಕು ಎಂದರು.
ಬಳ್ಳಾರಿ ಕಲ್ಯಾಣಮಠದ ಕಲ್ಯಾಣ ಸ್ವಾಮೀಜಿ ಮಾತನಾಡಿ, ವೀರಶೈವ ಮಠಾಧೀಪತಿಗಳಾದ ನಾವು ಎಲ್ಲ ಸಮುದಾಯದ ಕಾರ್ಯಕ್ಕೆ ಸ್ಪಂದಿಸುತ್ತಿದ್ದೇವೆ. ಇಂದು ನಮಗೆ ಜನ್ಮ ಕೊಟ್ಟ ಸಮುದಾಯವೇ ಕಷ್ಟದಲ್ಲಿರುವಾಗ ಎಲ್ಲ ಸ್ವಾಮೀಜಿ ಸ್ಪಂದಿಸುವ ಅಗತ್ಯ ಇದೆ ಎಂದರು.