ಎಸ್ಪಿ ಕಾರ್ಯಕ್ಕೆ ಜೈನ ಮುನಿಗಳಿಂದ ಶ್ಲಾಘನೆ : ಪೊಲೀಸ್ ಇಲಾಖೆಗೆ ಸಾರ್ವಜನಿಕರ ಕೃತಜ್ಞತೆ
ಬೆಳಗಾವಿ : ಶುಕ್ರವಾರ ಜೈನಮುನಿ ಕಾಮಕುಮಾರ ನಂದಿ ಮಹಾರಾಜರು ಕಾಣೆಯಾಗಿದ್ದಾರೆ ಎಂಬ ಪ್ರಕರಣ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಈ ಮಾಹಿತಿ ಪಡೆದ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ತಡರಾತ್ರಿ ಚಿಕ್ಕೋಡಿಗೆ ಆಗಮಿಸಿ ಕೇವಲ ನಾಲ್ಕು ಗಂಟೆಯಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದರು.
ಶನಿಯ ಬೆಳಗಿನ ನಾಲ್ಕು ಗಂಟೆಗೆ ಕಾಮಕುಮಾರ ನಂದಿ ಮಹಾರಾಜರ ಮೃತದೇಹದ ಹುಡುಕಾಟ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಆರೋಪಿಗಳು ಪೊಲೀಸರ ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತ ಗೊಂದಲ ಉಂಟುಮಾಡಿದರು. ಮಳೆಯ ನಡುವೆಯೇ ಕಬ್ಬಿನ ಗದ್ದೆಗಳಲ್ಲಿ ಸ್ವಾಮೀಜಿ ಮೃತದೇಹದ ಹುಡುಕಾಟ ಮುಂದುವರಿದಿತ್ತು.
ಕೊನೆಗೂ ಆರೋಪಿಗಳ ಬಾಯಿ ಬಿಡಿಸುವಲ್ಲಿ ಯಶಸ್ವಿಯಾದ ಪೊಲೀಸರು ನಂತರ ಇನ್ನೂರು ಅಡಿ ಕೊಳವೆ ಬಾವಿಯಲ್ಲಿ ತಪಾಸಣೆ ಮುಂದುವರಿಸಿದ್ದರು. ನಂತರ ಇಪ್ಪತ್ತು ಅಡಿ ಆಳದವರೆಗೆ ತ್ವರಿತ ಕಾರ್ಯಾಚರಣೆ ನಡೆಸಿ ನೆಲ ಅಗೆಯಲಾಯಿತು.
ಈ ಸಂದರ್ಭದಲ್ಲಿ ಮಹಾರಾಜರ ಸಾವಿರಾರು ಭಕ್ತರ ಜೊತೆ, ಪರಿಸ್ಥಿತಿ ಕೈಮೀರದಂತೆ ಎಚ್ಚರಿಕೆ ವಹಿಸಿದ್ದ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ಕಾರ್ಯಕ್ಕೆ ಸ್ವಂತ: ನಾಂದನಿ ಮಠದ ಜೀನಸೇನ ಭಟ್ಟಾಚಾರ್ಯ ಸ್ವಾಮೀಜಿ ಶ್ಲಾಘನೆ ವ್ಯಕ್ತಪಡಿಸಿದರು.
ಘಟನೆ ಕುರಿತಾಗಿ ಪೊಲೀಸ್ ಇಲಾಖೆ ಮಾಡಿರುವ ಕಾರ್ಯ ಶ್ಲಾಘನೀಯ. ಬಹಳ ಕಷ್ಟಪಟ್ಟು ಪೊಲೀಸರು ಕಾರ್ಯ ನಿರ್ವಹಿಸಿದ್ದು, ಮುಂಬರುವ ದಿನಗಳಲ್ಲಿ ನಿಷ್ಪಕ್ಷಪಾತ ತನಿಕೆ ನಡೆಸುವ ವಿಶ್ವಾಸವಿದೆ. ಇವರ ಕಾರ್ಯಕ್ಕೆ ಎಲ್ಲಾ ಮುನಿಗಳ ಆಶಿರ್ವಾದ ಇದ್ದೇ ಇರುತ್ತದೆ.
ಜೀನಸೇನ ಭಟ್ಟಾಚಾರ್ಯ ಸ್ವಾಮೀಜಿ
ನಾಂದನಿ ಜೀನಮಠ
ಪಂಚಭೂತಗಳಲ್ಲಿ ಲೀನರಾದ ಜೈನಮುನಿ
ಬರ್ಬರ ಹತ್ಯೆಯಾಗಿದ್ದ ಕಾಮಕುಮಾರ ನಂದಿ ಮಹಾರಾಜರ ಅಂತ್ಯಕ್ರಿಯೆ ಚಿಕ್ಕೋಡಿ ತಾಲೂಕಿನ ಹಿರೇಕೊಡಿ ನಂದಿ ಪರ್ವತ ಆಶ್ರಮದ ತೋಟದಲ್ಲಿ ಜರುಗಿತು.

ಭಾನುವಾರ ಮಧ್ಯಾಹ್ನ ಒಂದು ಗಂಟೆಗೆ ಹಿರೇಕೊಡಿ ನಂದಿ ಪರ್ವತ ಆಶ್ರಮಕ್ಕೆ ಕಾಮಕುಮಾರ ಮಹಾರಾಜರ ಪಾರ್ಥಿವ ಶರಿರ ಆಗಮಿಸಿತ್ತು. ಈ ಸಂದರ್ಭದಲ್ಲಿ ಅಗಲಿದ ಶ್ರೀಗಳನ್ನು ನೆನೆದು ಭಕ್ತರು ಕಣ್ಣೀರು ಹಾಕಿದರು.
ಶ್ರೀಗಳ ಪೂರ್ವಾಶ್ರಮದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಅಂತಿಮ ವಿಧಿ ವಿಧಾನಕ್ಕೆ ಪೂರ್ವತಯಾರಿ ಮಾಡಿಕೊಂಡಿದ್ದ ಹಿನ್ನಲೆಯಲ್ಲಿ ಆಶ್ರಮದ ಪಕ್ಕದಲ್ಲಿನ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಿತು.


