ಬಿಜೆಪಿ ನಾಯಕರಿಗೆ ಆಟ ; ಜಗದೀಶ್ ಶೆಟ್ಟರ್ ಗೆ ಸಂಕಟ
ಬೆಳಗಾವಿ : ಜಿಲ್ಲೆಯ ಸ್ಥಳೀಯ ಬಿಜೆಪಿ ನಾಯಕರ ಒಳಜಗಳ ಇನ್ನೂ ಬಗೆಯರಿಯುವ ಲಕ್ಷಣ ಕಂಡುಬರುತ್ತಿಲ್ಲ. ರಾಮದುರ್ಗ ಬಿಜೆಪಿಯಲ್ಲಿನ ಒಳಜಗಳದಿಂದ ಸಧ್ಯ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರಿಗೆ ಸಂಕಟ ಎದುರಾಗಿದೆ.
ಹೌದು ಚುನಾವಣೆ ಸಮಯದಲ್ಲೇ ಕಳೆದ ವಿಧಾನಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಚಿಕ್ಕರೇವಣ್ಣ ಹಾಗೂ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಬಣಗಳ ಒಳ ಜಗಳ ಬೀದಿಗೆ ಬಂದಿದ್ದು ಇದರಿಂದ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರಿಗೆ ಇರುಸು, ಮುರುಸು ತರಿಸಿದೆ.
ರಾಮದುರ್ಗ ತಾಲೂಕಿನ ಪ್ರಚಾರ ಸಂದರ್ಭದಲ್ಲಿ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಜೊತೆ ಜಗದೀಶ್ ಶೆಟ್ಟರ್ ಕಾಣಸಿಕೊಳ್ಳುವುದಕ್ಕೆ ಸ್ವತಃ ಚಿಕ್ಕರೇವಣ್ಣ ಬೆಂಬಲಿಗರು ಆಕ್ರೋಶ ಹೊರಹಾಕಿರುವ ಘಟನೆ ನಡೆದಿದೆ. ನಿಮಗೆ ಅವರೇ ಬೇಕಾದರೆ ನಮ್ಮ ಅವಶ್ಯಕತೆ ಏನಿತ್ತು ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಜಗದೀಶ್ ಶೆಟ್ಟರ್ ಅವರು ಯಾದವಾಡ ಮನೆಗೆ ಭೇಟಿ ನೀಡಿದ್ದನ್ನು ಚಿಕ್ಕರೇವಣ್ಣ ಬೆಂಬಲಿಗರು ವಿರೋಧಿಸಿದ್ದರು. ಯಾವುದೇ ಕಾರಣಕ್ಕೆ ಯಾದವಾಡ ಕುಟುಂಬದವರು ಬಿಜೆಪಿ ಜೊತೆ ಬರುವುದು ಬೇಡ ಎಂದೇ ಹೇಳಿದ್ದರು. ಈಗ ಮತ್ತೆ ಅದೇ ರಾಗವನ್ನೇ ತಗೆದಿದ್ದಾರೆ.


