ESIC ಆಸ್ಪತ್ರೆ ನಿರ್ಮಾಣ ಕಾಮಗಾರಿ ಪ್ರಾರಂಭಿಸುವಂತೆ ರಾಜ್ಯಸಭೆಯಲ್ಲಿ ಸಂಸದ ಕಡಾಡಿ ಆಗ್ರಹ
ದೆಹಲಿ : ಬೆಳಗಾವಿ ನಗರಕ್ಕೆ ಇ.ಎಸ್.ಆಯ್.ಸಿ 100 ಹಾಸಿಗೆಗಳ ಆಸ್ಪತ್ರೆ ಮಂಜೂರಾಗಿದ್ದು, ಆಸ್ಪತ್ರೆ ನಿರ್ಮಾಣ ಕಾರ್ಯ ವಿಳಂಬವಾಗುತ್ತಿರುವ ಕುರಿತು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ರಾಜ್ಯಸಭೆಯ ಮುಂಗಾರು ಅಧಿವೇಶನದ ವಿಶೇಷ ವೇಳೆಯಲ್ಲಿ ಶೀಘ್ರವಾಗಿ ಆಸ್ಪತ್ರೆ ನಿರ್ಮಾಣ ಕಾಮಗಾರಿ ಆರಂಭಿಸಬೇಕೆಂದು ಕೇಂದ್ರ ಸರ್ಕಾರನ್ನು ಒತ್ತಾಯಿಸಿದರು.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಸಚಿವ ರಾಮೇಶ್ವರ ತೇಲಿ ಅವರು ಸಂಸದರಿಗೆ ಮಾಹಿತಿಯನ್ನು ಲಿಖಿತ ಉತ್ತರ ನೀಡುವ ಭರವಸೆ ನೀಡಿದರು. ತದನಂತರ ಉಪ ಸಭಾಪತಿಗಳಾದ ಹರಿವಂಶ್ ನಾರಾಯಣ್ ಸಿಂಗ್ ಅವರು ಮಾತನಾಡಿ ಸಚಿವರು ನೇರವಾಗಿ ತಮಗೆ ಲಿಖಿತ ಉತ್ತರ ನೀಡುತ್ತಾರೆ ಎಂದು ತಿಳಿಸಿದರು.
ಕರ್ನಾಟಕದಲ್ಲಿರುವ ಇಎಸ್‌ಐ ಆಸ್ಪತ್ರೆಗಳಿಗೆ ಹಣ ಮಂಜೂರು ಮಾಡಿರುವ ಕುರಿತು ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಸಚಿವರು ಕರ್ನಾಟಕದಲ್ಲಿ 11 ಇಎಸ್‌ಐ ಆಸ್ಪತ್ರೆಗಳಿವೆ. ಬೆಳಗಾವಿಯಲ್ಲಿ ಈಗಿರುವ ಆಸ್ಪತ್ರೆ ಕಟ್ಟಡ ಶಿಥಿಲಾವಸ್ಥೆಯಲ್ಲಿರುವ ಕಾರಣ ಅಲ್ಲಿ ಹೊಸ ಆಸ್ಪತ್ರೆ ಕಟ್ಟಡ ನಿರ್ಮಿಸಲು ಇಎಸ್‌ಐಸಿ ನಿರ್ಧರಿಸಿದೆ. ಅದರಂತೆ ಈಗಿರುವ ಆಸ್ಪತ್ರೆಯನ್ನು 50 ಹಾಸಿಗೆಗಳಿಂದ 100 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲು ತಾತ್ವಿಕ ಅನುಮೋದನೆ ನೀಡಿದೆ.
ಆಸ್ಪತ್ರೆ ನಿರ್ಮಾಣಕ್ಕಾಗಿ ಬೆಳಗಾವಿಯ ಉದ್ಯಮಭಾಗ, ಮಚ್ಚೆ ಪ್ರದೇಶದಲ್ಲಿ 5 ಎಕರೆ ಜಾಗವನ್ನು ಮಂಜೂರು ಮಾಡುವಂತೆ ಇಎಸ್‌ಐಸಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ಇದಲ್ಲದೆ, ಇಎಸ್‌ಐ ಕಾರ್ಪೊರೇಷನ್ ಕರ್ನಾಟಕದ ವಿವಿಧ ನಗರಗಳಲ್ಲಿ 8 ಹೊಸ ಆಸ್ಪತ್ರೆಗಳನ್ನು ಸ್ಥಾಪಿಸಲು ತಾತ್ವಿಕ ಅನುಮೋದನೆಯನ್ನು ನೀಡಿದೆ.
ದೊಡ್ಡಬಳಾಪುರ 100 ಹಾಸಿಗೆಗಳ ಇಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ ರೂ. 93.41 ಕೋಟಿ, ಶಿವಮೊಗ್ಗ 100 ಹಾಸಿಗೆಗಳ ಇಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ ರೂ.99.77 ಕೋಟಿ, ಬೊಮ್ಮಸಂದ್ರ 200 ಹಾಸಿಗೆಗಳ ಇಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ ರೂ.168.80 ಕೋಟಿ, ದಾವಣಗೆರೆ 50 ಹಾಸಿಗೆಗಳ ಇಎಸ್‌ಐ ಆಸ್ಪತ್ರೆಯ ನವೀಕರಣ ಮತ್ತು ಉನ್ನತೀಕರಣಕ್ಕೆ ರೂ.14.21 ಕೋಟಿ ಅನುದಾನ ನೀಡಲಾಗಿದೆ. ಬಳ್ಳಾರಿ, ಹಾರೋಹೊಳ್ಳಿ, ಉಡುಪಿ 100 ಹಾಸಿಗೆಗಳ ಇಎಸ್‌ಐ ಆಸ್ಪತ್ರೆ ನಿರ್ಮಾಣ ಪ್ರಕ್ರಿಯೆ ಭೂ ಮಂಜೂರಾತಿ ಹಂತದಲ್ಲಿದೆ.
ಅಸ್ತಿತ್ವದಲ್ಲಿರುವ 50 ಹಾಸಿಗೆಗಳ ಹುಬ್ಬಳ್ಳಿ ಇಎಸ್‌ಐ ಆಸ್ಪತ್ರೆಯ ಉನ್ನತೀಕರಣ ಯೋಜನೆಯು ಅಂದಾಜು ವೆಚ್ಚದ ಹಂತದಲ್ಲಿದೆ ಎಂದು ಸಚಿವರು ಉತ್ತರಿಸಿದ್ದಾರೆಂದು ಸಂಸದ ಈರಣ್ಣ ಕಡಾಡಿ ಮಾಹಿತಿ ನೀಡಿದರು.


