ಬೆಳಗಾವಿ : ವಿದ್ಯುತ್ ಬಿಲ್ ಕಟ್ಟಲ್ಲ ; ನಮ್ಮ ಸರ್ಕಾರ ಕಟ್ಟುತ್ತೆ ಎಂದ ಜನ
ಕಿತ್ತೂರು : ವಿದ್ಯುತ್ ಬಿಲ್ ಕಟ್ಟೋದಿಲ್ಲಾ ಸರ್ಕಾರವೇ ವಿದ್ಯುತ್ ಬಿಲ್ ಪಾವತಿ ಮಾಡಲಿ ಎಂದ ವೀರಾಪುರ ಗ್ರಾಮಸ್ಥರು ವಿದ್ಯುತ್ ಬಿಲ್ ಪಾವತಿದಾರನ ವಿರುದ್ಧ ಜಗಳಕ್ಕೆ ನಿಂತ ಘಟನೆ ನಡೆದಿದೆ.
ಕಳೆದ ವಾರವಷ್ಟೇ ರಾಜ್ಯ ವಿಧಾನಸಭಾ ಚುನಾವಣೆ ಮುಗಿದಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಇನ್ನೂ ಕಾಂಗ್ರೆಸ್ ಪಕ್ಷವೂ ಚುನಾವಣೆಗಿಂತ ಮುಂಚೆ ಪ್ರಣಾಳಿಕೆಯಲ್ಲಿ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಿದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 40 ಘಂಟೆಗಳಲ್ಲಿಯೇ ಯಾರು ಸಹ ವಿದ್ಯುತ್ ಬಿಲ್ ಪಾವತಿ ಮಾಡಬೇಕಾಗಿಲ್ಲ ಎಂದು ಹೇಳಿದ್ದೆ ತಡ ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಜನ ವಿದ್ಯುತ್ ಬಿಲ್ ಪಾವತಿಸಲು ಹಿಂದೇಟು ಹಾಕಿ, ಸಿಬ್ಬಂದಿಗಳ ಜೊತೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ.
ಇಂತದ್ದೆ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಮಲಪ್ರಭಾ ನದಿ ದಂಡೆಯ ವೀರಾಪುರ ಗ್ರಾಮದಲ್ಲಿ ನಡೆದಿದ್ದು, ವಿದ್ಯುತ್ ಬಿಲ್ ಪಾವತಿಸೋದಕ್ಕೆ ಆಗುವುದಿಲ್ಲ, ಕಾಂಗ್ರೆಸ್ ಸರ್ಕಾರವೇ ವಿದ್ಯುತ್ ಬಿಲ್ ಪಾವತಿ ಮಾಡಲಿ ಎಂದು ವಿದ್ಯುತ್ ಬಿಲ್ ಕಲೆಕ್ಟರ್ ಜೊತೆ ವಾಗ್ವಾದಕ್ಕೆ ಇಳಿದಿರುವುದು ಸರ್ಕಾರ ಹಾಗೂ ಹೆಸ್ಕಾo ಮಂಡಳಿಗೆ ಇರಿಸು ಮುರಿಸು ಆಗಿದೆ.


