GRUHALAKSHMI : ಗೃಹಲಕ್ಷ್ಮಿ ಮರು ಅರ್ಜಿ – ಹೊಸ ನಿಯಮಗಳ ಕಂಪ್ಲೀಟ್ ಗೈಡ್ ಇಲ್ಲಿದೆ
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆಯಲ್ಲಿ ಈಗ ದೊಡ್ಡ ಮಟ್ಟದ ತಾಂತ್ರಿಕ ಬದಲಾವಣೆ ಗಾಳಿ ಬೀಸಿದೆ. ಪ್ರತಿ ತಿಂಗಳು 2,000 ರೂಪಾಯಿ ಪಡೆಯುತ್ತಿರುವ ಹಾಲಿ ಫಲಾನುಭವಿಗಳು ಹಾಗೂ ಹೊಸದಾಗಿ ನೊಂದಾಯಿಸಿಕೊಳ್ಳಲು ಕಾಯುತ್ತಿರುವ ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಇಲಾಖೆ ಮಹತ್ವದ ಅಪ್‌ಡೇಟ್ ನೀಡಿದೆ.
ಇನ್ನು ಕೇವಲ ಎರಡು ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಮರು ಪರಿಶೀಲನೆ ಹಾಗೂ ಹೊಸ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಲಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಪೂರ್ಣಗೊಳಿಸಿದೆ.
ಸೈಬರ್ ಸೆಂಟರ್ ಅಲೆದಾಟಕ್ಕೆ ಬ್ರೇಕ್ – ಮನೆಗೇ ಬರಲಿದ್ದಾರೆ ಅಂಗನವಾಡಿ ಕಾರ್ಯಕರ್ತೆಯರು
ಹಿಂದಿನ ಬಾರಿ ಅರ್ಜಿ ಸಲ್ಲಿಸುವಾಗ ಮಹಿಳೆಯರು ಅನುಭವಿಸಿದ ಸಾಲಿನ ಕಷ್ಟ ಹಾಗೂ ಗೊಂದಲಗಳನ್ನು ತಪ್ಪಿಸಲು ಸರ್ಕಾರ ಈ ಬಾರಿ ಮಾಸ್ಟರ್ ಪ್ಲಾನ್ ರೂಪಿಸಿದೆ. ಗ್ರಾಮೀಣ ಮತ್ತು ನಗರ ಭಾಗದ ಅನಕ್ಷರಸ್ಥ ಹಾಗೂ ಬಡ ಮಹಿಳೆಯರಿಗೆ ಅನುಕೂಲ ಮಾಡಿಕೊಡಲು ಇಲಾಖೆಯು ಅಂಗನವಾಡಿ ಕಾರ್ಯಕರ್ತೆಯರ ಹೆಗಲಿಗೆ ಈ ಜವಾಬ್ದಾರಿ ವಹಿಸಿದೆ. ಇಲಾಖೆಯು ಅಭಿವೃದ್ಧಿಪಡಿಸಿರುವ ವಿಶೇಷ ಮೊಬೈಲ್ ಆಪ್ (App) ಮೂಲಕ ಅಂಗನವಾಡಿ ಕಾರ್ಯಕರ್ತೆಯರೇ ನೇರವಾಗಿ ಪ್ರತಿ ಮನೆಗೆ ಭೇಟಿ ನೀಡಿ ಉಚಿತವಾಗಿ ಅರ್ಜಿ ಭರ್ತಿ ಮಾಡಿಕೊಡಲಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರ ಮೊಬೈಲ್‌ನಲ್ಲಿ ಬಯೋಮೆಟ್ರಿಕ್ (ಹೆಬ್ಬೆರಳು ಗುರುತು) ಯಂತ್ರ ಇರುವುದಿಲ್ಲ. ಆದ್ದರಿಂದ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕಗೊಳಿಸಲು ಮುಖ ಗುರುತಿಸುವಿಕೆ (Face Recognition) ಅಥವಾ ಮೊಬೈಲ್ ಒಟಿಪಿ (OTP) ತಂತ್ರಜ್ಞಾನವನ್ನು ಬಳಸಲು ಸರ್ಕಾರ ಮುಂದಾಗಿದೆ. ಇದರೊಂದಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇಷ್ಟಪಡುವವರು ಎಂದಿನಂತೆ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ಅರ್ಜಿ ಸಲ್ಲಿಕೆಗೆ ಬೇಕಾಗುವ ಪ್ರಮುಖ ದಾಖಲೆಗಳು:
ಮರು ಪರಿಶೀಲನೆ ಹಾಗೂ ಹೊಸದಾಗಿ ಸಲ್ಲಿಸುವ ಅರ್ಜಿಯಲ್ಲಿ ನಕಲಿ ದಾಖಲಾತಿಗಳನ್ನು ತಡೆಯಲು ಸರ್ಕಾರ ಕೆಲವು ಕಡ್ಡಾಯ ನಿಯಮಗಳನ್ನು ಜಾರಿಗೆ ತಂದಿದೆ..
ಮೂಲ ಮಾಹಿತಿ: ಅರ್ಜಿದಾರ ಮಹಿಳೆಯ ನಿಖರವಾದ ಹೆಸರು, ಪ್ರಸ್ತುತ ಇರುವ ವಿಳಾಸ ಮತ್ತು ಆಧಾರ್ ಕಾರ್ಡ್ ನಕಲು.
ಬ್ಯಾಂಕ್ ಅಪ್‌ಡೇಟ್: ಕರ್ನಾಟಕದಲ್ಲೇ ಇರುವ, ಸದ್ಯ ಚಾಲ್ತಿಯಲ್ಲಿರುವ ಮತ್ತು ಕಡ್ಡಾಯವಾಗಿ ಆಧಾರ್ ಲಿಂಕ್ (Aadhaar Seeding) ಆಗಿರುವ ಬ್ಯಾಂಕ್ ಖಾತೆಯ ವಿವರ.
ವೋಟರ್ ಐಡಿ ಕಡ್ಡಾಯ: ಅರ್ಹ ಫಲಾನುಭವಿಗಳನ್ನು ಗುರುತಿಸಲು ಈ ಬಾರಿ ಮತದಾರರ ಗುರುತಿನ ಚೀಟಿ (Voter ID) ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕಿದೆ.
ಸ್ವಘೋಷಿತ ಜಾತಿ ಪತ್ರ: ಒಂದು ವೇಳೆ ಸದ್ಯಕ್ಕೆ ಅಧಿಕೃತ ಜಾತಿ ಪ್ರಮಾಣ ಪತ್ರ ಕೈಯಲ್ಲಿ ಇಲ್ಲದಿದ್ದರೆ, ಮಹಿಳೆಯರು ತಮ್ಮ ಜಾತಿಯನ್ನು ತಾವೇ ಧೃಢೀಕರಿಸುವ ‘ಸ್ವಘೋಷಿತ ಜಾತಿ ಮಾಹಿತಿ’ ನೀಡಲು ಅವಕಾಶ ಕಲ್ಪಿಸಲಾಗಿದೆ.
ಯಾರಿಗೆ ಸಿಗಲಿದೆ ಅವಕಾಶ? ಯಾರಿಗೆ ಸಿಗಲ್ಲ?
ರಾಜ್ಯದ ವೋಟರ್ ಐಡಿ ಹೊಂದಿರುವ ಮತ್ತು ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ಎಂದು ಗುರುತಿಸಿಕೊಂಡಿರುವ ಪ್ರತಿಯೊಬ್ಬ ಮಹಿಳೆಗೂ ಇಲ್ಲಿ ಅವಕಾಶವಿದೆ. ಈಗಾಗಲೇ ಹಣ ಪಡೆಯುತ್ತಿರುವವರು ಈ ಮರು ಪರಿಶೀಲನೆಗೆ ಒಳಪಡಬೇಕು. ಇದರೊಂದಿಗೆ ಬಿಪಿಎಲ್, ಎಪಿಎಲ್ ಅಥವಾ ಅಂತ್ಯೋದಯ ಕಾರ್ಡ್ ಹೊಂದಿದ್ದು ಹೊಸದಾಗಿ ಸೇರಬಯಸುವವರೂ ಅರ್ಜಿ ಹಾಕಬಹುದು.
ಆದರೆ, ಯೋಜನೆ ಹೆಸರಿನಲ್ಲಿ ಆಗುತ್ತಿರುವ ಆರ್ಥಿಕ ನಷ್ಟ ತಡೆಯಲು ಸರ್ಕಾರ ಅನರ್ಹರಿಗೆ ಬ್ರೇಕ್ ಹಾಕಿದೆ. ಮರಣ ಹೊಂದಿರುವ ಹಳೆಯ ಫಲಾನುಭವಿಗಳ ಹೆಸರಿನಲ್ಲಿ ಅರ್ಜಿ ಹಾಕಲು ಬರುವುದಿಲ್ಲ (ಆದರೆ ಅದೇ ರೇಷನ್ ಕಾರ್ಡ್‌ನಲ್ಲಿರುವ ಅರ್ಹ ಸೊಸೆ ಅಥವಾ ಮಗಳಿಗೆ ಯೋಜನೆಯನ್ನು ವರ್ಗಾಯಿಸಲು ಅವಕಾಶ ಸಿಗುವ ಸಾಧ್ಯತೆ ಇದೆ).
ಇದರೊಂದಿಗೆ ಆದಾಯ ತೆರಿಗೆ (Income Tax) ಪಾವತಿಸುವವರು ಹಾಗೂ ಜಿಎಸ್‌ಟಿ (GST) ವ್ಯಾಪ್ತಿಗೆ ಬರುವ ಕುಟುಂಬದ ಮಹಿಳೆಯರನ್ನು ಈ ಯೋಜನೆಯಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ. ನೈಜ ಬಡ ಕುಟುಂಬಗಳಿಗೆ ಮಾತ್ರ ಸರ್ಕಾರದ ಆರ್ಥಿಕ ನೆರವು ತಲುಪಿಸಲು ಈ ಮಹತ್ವದ ಕ್ರಮ ಕೈಗೊಳ್ಳಲಾಗಿದ್ದು, ಮಹಿಳೆಯರು ಅಗತ್ಯ ದಾಖಲೆಗಳೊಂದಿಗೆ ಸಿದ್ಧರಾಗಿರಲು ಕೋರಲಾಗಿದೆ.

