ಗೋಕಾಕ : ವರ್ಗಾವಣೆಗೊಂಡ ಹಿರಿಯ ಸಿವಿಲ್ ನ್ಯಾಯಾಧೀಶ ದಂಪತಿಗಳ ಬೀಳ್ಕೊಡುಗೆ
ಗೋಕಾಕ: ವಕೀಲಿ ವೃತ್ತಿಯನ್ನು ಕೌಶಲ್ಯತೆಯಿಂದ ಮತ್ತು ಘನತೆಯಿಂದ ನಿರ್ವಹಿಸುವುದು ಪ್ರಚಲಿತ ದಿನಗಳಲ್ಲಿ ಅಗತ್ಯವಿದೆ ಎಂದು ಇಲ್ಲಿನ ೧ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಶಂಕರ ಕೆ.ಎಂ. ಕಿವಿಮಾತು ಹೇಳಿದರು.
ಬುಧವಾರ ಇಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿ ವಕೀಲರ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ಜಂಟಿಯಾಗಿ ಹಮ್ಮಿಕೊಂಡಿದ್ದ ವರ್ಗಾವಣೆಗೊಂಡ ನ್ಯಾಯಾಧೀಶರ ಬೀಳ್ಕೊಡುವ ಸಮಾರಂಭದಲ್ಲಿ ನೀಡಿದ ಆತಿಥ್ಯಕ್ಕೆ ಪ್ರತಿಕ್ರಿಯಿಸಿದ ಅವರು, ವಕೀಲಿ ವೃತ್ತಿಯನ್ನು ಕೇವಲ ಪುಸ್ತಕಗಳನ್ನಷ್ಟೇ ಅವಲಂಭಿಸಿ ನಡೆಸದೇ ಅದಕ್ಕೆ ತಕ್ಕ ಘನತೆಯನ್ನೂ ಕಾಯ್ದುಕೊಂಡು ಮುಂದುವರೆಯುವುದೂ ಇಂದಿನ ಅಗತ್ಯತೆ ಎಂದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ದೀಪಾ ಜಿ. ಅವರು ವಕೀಲರ ಸಂಘದಿಂದ ನೀಡಲಾದ ಆತಿಥ್ಯಕ್ಕೆ ಪ್ರತಿಕ್ರಿಯಿಸಿ ವಕೀಲಿ ವೃತ್ತಿಯನ್ನು ನಿರ್ಭಯತೆಯಿಂದ ಮಾಡಿದಾಗ ಕಕ್ಷೀಗಾರರಿಗೆ ಗುಣಮಟ್ಟದ ಸೇವೆಯನ್ನು ನೀಡಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿರಿಯ ವಕೀಲರಾದ ಎ.ವಿ.ಹುಲಗಬಾಳಿ, ಆರ್.ಎಂ.ಬಳ್ಳಾರಿ, ಬಿ.ಟಿ.ಬೀರನಗಡ್ಡಿ ಹಾಗೂ ವಕೀಲರ ಸಂಘದ ಸಹ ಕಾರ್ಯದರ್ಶಿ ಜಿ.ಆರ್.ಕುಂಬಾರ ಅವರು ಮಾತನಾಡಿ, ನ್ಯಾಯಾಧೀಶರ ಕಾರ್ಯ ವೈಖರಿಯನ್ನು ಗುಣಗಾನ ಮಾಡಿದರು.
ಇದೇ ಸಂದರ್ಭದಲ್ಲಿ ವಕೀಲರ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ವರ್ಗಾವಣೆಗೊಂಡ ದಂಪತಿ ನ್ಯಾಯಾಧೀಶರಾದ ದೀಪಾ ಜಿ. ಮತ್ತು ಶಂಕರ ಕೆ.ಎಂ. ಅವರನ್ನು ಅತ್ಮೀಯವಾಗಿ ಸತ್ಕರಿಸಿ, ಬೀಳ್ಕೊಟ್ಟರು.
ವೇದಿಕೆಯಲ್ಲಿ ೨ನೇ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಧೀಶೆ ವಕೀಲರ ರೂಪಾ ಮಟ್ಟಿ, ಸಂಘದ ಅಧ್ಯಕ್ಷ ಬಸವರಾಜ ಕೋಟಗಿ, ಉಪಾಧ್ಯಕ್ಷ ಆನಂದ ಕುಲಕಣ ð ಮಹಿಳಾ ಪ್ರತಿನಿಧಿ ಪ್ರೇಮಾ ಚಿಕ್ಕೋಡಿ ಮೊದಲಾದವರು ಉಉಪಸ್ಥಿತರಿದ್ದರು ನೋಟರಿ ಶಂಕರ ಗೋರೋಶಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಸ್.ಜಿಡ್ಡಿಮನಿ ವಂದಿಸಿದರು.


