ಶ್ರೀಗುರುಶಾಂತಲಿಂಗ ಶಿವಾಚಾರ್ಯರ ಪುಣ್ಯಾರಾಧನೆ
ಧಾರವಾಡ : ತಾಲೂಕಿನ ಅಮ್ಮಿನಬಾವಿ ಗ್ರಾಮದ ಸಂಸ್ಥಾನ ಪಂಚಗೃಹ ಹಿರೇಮಠದ ನಿಕಟಪೂರ್ವ ಲಿಂಗೈಕ್ಯ ಪಟ್ಟಾಧ್ಯಕ್ಷರಾದ ಶ್ರೀಗುರುಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಲಿಂಗಾಂಗ ಸಾಮರಸ್ಯದ 86ನೆಯ ಪುಣ್ಯಾರಾಧನೆ ಜೂನ್-27ರಂದು (ಆಷಾಢ ಶುದ್ಧ ದ್ವಿತಿಯಾ) ಶುಕ್ರವಾರ ಜರುಗಲಿದೆ.
ಪುಣ್ಯಾರಾಧನೆಯ ಅಂಗವಾಗಿ ‘ಶಿವಾಚಾರ್ಯ ಶಿವಯೋಗಿ’ ಶ್ರೀಗಳ ಯೋಗಸಮಾಧಿಗೆ ಪ್ರಾತ:ಕಾಲ ಏಕಾದಶ ಮಹಾರುದ್ರಾಭಿಷೇಕ, ಅಷ್ಟೋತ್ತರ ನಾಮಾವಳಿ, ನೂತನಾಂಬರ ಧಾರಣೆ, ಮಹಾಮಂಗಳಾರತಿ ಸೇರಿದಂತೆ ಹಲವು ಧಾರ್ಮಿಕ ಕೈಂಕರ್ಯಗಳು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ ಹಾಗೂ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿವೆ.
ಶಿವಯೋಗ ಸಾಧನೆ : ಶ್ರೀಮಠದ ಪವಿತ್ರ ಗುರುಪರಂಪರೆಯಲ್ಲಿ ಈಗಿನ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಗುರುವರ್ಯರಾದ ನಿಕಟಪೂರ್ವ ಲಿಂಗೈಕ್ಯ ಶ್ರೀಗುರುಶಾಂತಲಿಂಗ ಶಿವಾಚಾರ್ಯರು
ಎಲ್ಲ ದ್ವಂದ್ವ-ವ್ಶೆರುಧ್ಯಗಳಿಂದ ಹೊರಬಂದು ತಮ್ಮದೇ ಆದ ಸತ್ಯ-ಶುದ್ಧ ಜೀವನದ ಸೂಕ್ಷ್ಮ ಸಿದ್ಧಾಂತಗಳನ್ನು ರೂಢಿಸಿಕೊಂಡಿದ್ದರು.
ಶ್ರೀಮಠದ ಆದರ್ಶಗಳನ್ನು ಪರಿಪಾಲಿಸಿ ಭಕ್ತ ಗಣಕ್ಕೆ ಇಷ್ಟಲಿಂಗ ಪೂಜೆಯ ಘನತೆಯನ್ನು ಮನವರಿಕೆ ಮಾಡಿ, ತನ್ಮೂಲಕ ಶಿವಯೋಗ ಸಾಧನೆಯಲ್ಲಿ ಬಯಲ ಬೆಳಗನ್ನು ಕಾಣುವ ವಿಧಾನವನ್ನು ತಿಳಿಸಿ ಎಲ್ಲರಿಗೂ ಸರಳ-ಸಜ್ಜನಿಕೆಯ ಧಾರ್ಮಿಕ ಮಾರ್ಗದರ್ಶನ ಮಾಡಿದ್ದನ್ನು ಭಕ್ತ ಸಂಕುಲ ಇಂದಿಗೂ ಸ್ಮರಣೆ ಮಾಡಿಕೊಳ್ಳುತ್ತಾರೆ.


