ರಕ್ತದ ಮಡುವಿನಲ್ಲಿ ಬಿದ್ದಿದ್ದ ವೃದ್ಧನಿಗೆ ನೆರವಾದ ಡಿಸಿಪಿ ಸ್ನೇಹಾ ಪಿ.ವಿ ; ಸಾರ್ವಜನಿಕರ ಮೆಚ್ಚುಗೆ
ಬೆಳಗಾವಿ : ಅಪಘಾತದಲ್ಲಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವೃದ್ಧನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಕೂಡಲೇ ಆಸ್ಪತ್ರೆಗೆ ಸಾಗಿಸಲು ನೆರವಾದ ನಗರ ಪೊಲೀಸ್ ಇಲಾಖೆ ಡಿಸಿಪಿ ಸ್ನೇಹಾ ಪಿ.ವಿ. ಕಾರ್ಯಕ್ಕೆ ಸಾರ್ವಜನಿಕರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಪೊಲೀಸರು ಕೇವಲ ಕಾನೂನು ಪಾಠ ಮಾಡಿ ಜನರಿಗೆ ದಂಡ ಹಾಕುವುದಲ್ಲ. ರಸ್ತೆ ಅಪಘಾತದಲ್ಲಿ ಗಾಯಗೊಂಡ ವೃದ್ಧನಿಗೆ ಬೆಳಗಾವಿ ನಗರ ಪೊಲೀಸ್ ಇಲಾಖೆಯ ಡಿಸಿಪಿ ಸ್ನೇಹಾ ಪಿ.ವಿ. ಸ್ಥಳದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಆ್ಯಂಬುಲೆನ್ಸ್ ನಲ್ಲಿ ಸ್ವತಃ ತಾವೇ ಮುಂದೆ ನಿಂತು ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದ ಘಟನೆ ನಡೆದಿದೆ.
ಕಾಕತಿ ಪೊಲೀಸ್ ಠಾಣೆಗೆ ಪರಿಶೀಲನೆಗೆ ತೆರಳಿದ್ದ ಡಿಸಿಪಿ ಸ್ನೇಹಾ ಪಿ.ವಿ. ಬೆಳಗಾವಿಯಿಂದ ಯಮಕನಮರಡಿ ಮಾರ್ಗವಾಗಿ ಗೋಕಾಕಗೆ ಬೈಕ್ ಮೇಲೆ ತೆರಳುತ್ತಿದ್ದ ವೃದ್ಧನಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ರಕ್ತದ ಮಡುವಿನಲ್ಲಿದ್ದ ವೃದ್ಧನನ್ನು ಕಂಡ ಡಿಸಿಪಿ ಸ್ನೇಹಾ ಕೂಡಲೇ ವೃದ್ಧನಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಸ್ಥಳೀಯ ಪೊಲೀಸ್ ಸಿಬ್ಬಂದಿಗಳು ಹಾಗೂ ಜನರ ಸಹಾಯದಿಂದ ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕಳುಹಿಸಿದರು.
ಪೊಲೀಸರೆಂದರೆ ಹೊಡೆಯುವುದು, ಬಡೆಯುವುದು, ವಿನಾಕಾರಣ ಕಿರುಕುಳ ನೀಡುತ್ತಾರೆ ಎಂದು ಆರೋಪ ಮಾಡುವ ಜನರಿಗೆ ಇಂಥ ಹೆಮ್ಮೆಯ ಅಧಿಕಾರಿಗಳು ಜನರ ರಕ್ಷಣೆಗೆ ಟೊಂಕ ಕಟ್ಟಿ ನಿಂತಿರುವುದಕ್ಕೆ ಡಿಸಿಪಿ ಸ್ನೇಹಾ ಪಿ.ವಿ. ಸಾಕ್ಷಿಯಾಗಿದ್ದಾರೆ. ಇವರ ಮಾನವೀಯತೆ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


