ಕುತೂಹಲ ಘಟ್ಟಕ್ಕೆ ಡಿಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ ; ಯಾರ ಕೈ ಮೇಲು…?
ಬೆಳಗಾವಿ : ಏಕಾಏಕಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಂಸದ ರಮೇಶ್ ಕತ್ತಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಲಿದ್ದು ಯಾರ ಕೈ ಮೇಲು ಎಂಬ ಕುತೂಹಲ ಮೂಡಿಸಿದೆ.
ರಾಜ್ಯದಲ್ಲಿ ಅತ್ಯಂತ ದೊಡ್ಡ ಡಿಸಿಸಿ ಬ್ಯಾಂಕ್ ಎಂಬ ಖ್ಯಾತಿ ಹೊಂದಿದೆ. ಇದೇ ಕಾರಣಕ್ಕೆ ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಕುಟುಂಬದ ಸದಸ್ಯರು ನಾನಾ ಬಗೆಯ ಕಸರತ್ತು ನಡೆಸುತ್ತಾರೆ. ಈ ನಡುವೆ ಯಾರ ಕೈ ಮೇಲಾಗುತ್ತದೆ ಎಂಬ ಚರ್ಚೆ ಜೋರಾಗಿದೆ.
ಸಧ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಇಬ್ಬರ ಹೆಸರು ಜೋರಾಗಿ ಕೇಳಿಬರುತ್ತಿದೆ. ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಹಾಗೂ ಕಿತ್ತೂರು ಮಾಜಿ ಶಾಸಕ ಮಹಾಂತೇಶ್ ದೊಡ್ಡಗೌಡರ್ ಅಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಹಿರಿಯರು ಕೈಗೊಳ್ಳುವ ನಿರ್ಧಾರ ಪ್ರಮುಖವಾಗಲಿದೆ.
ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಲಕ್ಷ್ಮಣ ಸವದಿ ಹಾಗೂ ಮಾಜಿ ಅಧ್ಯಕ್ಷ ರಮೇಶ್ ಕತ್ತಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಒಂದುವೇಳೆ ಪೈಪೋಟಿ ಏರ್ಪಟ್ಟರೆ ಅವಿರೋಧ ಆಯ್ಕೆಯು ಸಾಧ್ಯತೆ ತೀರಾ ವಿರಳ ಎಂದು ಹೇಳಲಾಗುತ್ತಿದೆ.
ಸುಮಾರು ಹತ್ತು ವರ್ಷಗಳ ಸುಧೀರ್ಘ ಅವದಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದ ರಮೇಶ್ ಕತ್ತಿ ಏಕಾಏಕಿ ರಾಜೀನಾಮೆ ನೀಡಿದ್ದನ್ನು ಇನ್ನೂ ಜಿಲ್ಲೆಯ ರೈತರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಮಧ್ಯೆ ಹೊಸ ಅಧ್ಯಕ್ಷರಿಗೆ ಹೆಚ್ಚಿನ ಸವಾಲು ಎದುರಾಗುವ ಸಾಧ್ಯತೆಯೂ ದಟ್ಟವಾಗಿದೆ.
ಕತ್ತಿ ಮನೆತನಕ್ಕೆ ಈ ಹಿಂದೆ ಜಿಲ್ಲಾ ರಾಜಕಾರಣದ ಮೇಲೆ ಸಾಕಷ್ಟು ಹಿಡಿತ ಇತ್ತು. ಆದರೆ ದಿ. ಉಮೇಶ್ ಕತ್ತಿ ಅವರ ಅಕಾಲಿಕ ನಿಧನದಿಂದ ಸಧ್ಯ ರಮೇಶ್ ಕತ್ತಿ ಒಬ್ಬಂಟಿಗಿದ್ದಾರೆ. ಇನ್ನೂ ಲೋಕಸಭಾ ಸೋಲಿನ ಬಳಿಕ ಅಣ್ಣಾಸಾಹೇಬ್ ಜೊಲ್ಲೆ ಜಾರಕಿಹೊಳಿ ಸಹೋದರರ ಜೊತೆ ಮುನಿಸು ಮರೆತು ಒಂದಾಗಿದ್ದು ಅನೇಕ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದೆ.


