ಮದುವೆಯಾದ 45 ದಿನಕ್ಕೆ ಓಡಿ ಹೋದ ಮಹಿಳೆ ; ಗಂಡ ಆತ್ಮಹತ್ಯೆಗೆ, ಮಹಿಳೆ ಬಂಧನ..!

ದಾವಣಗೆರೆ: ಮದುವೆಯಾಗಿ ಕೇವಲ 45 ದಿನಕ್ಕೆ ಬೇರೊಬ್ಬನೊಂದಿಗೆ ಓಡಿ ಹೋಗಿ ಪತಿ ಹಾಗೂ ಸೋದರ ಮಾವನ ಆತ್ಮಹತ್ಯೆಗೆ ಕಾರಣವಾದ ಮಹಿಳೆ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಮಹಿಳೆ ತನ್ನ ಪ್ರಿಯಕರನೊಂದಿಗೆ ಓಡಿ ಹೋದ ಹಿನ್ನೆಲೆ ಮನನೊಂದು ಪತಿ ಮತ್ತು ಸೋದರ ಮಾವ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ದಾವಣಗೆರೆಯಲ್ಲಿ ನಡೆದಿತ್ತು. ಈ ಸಂಬಂಧ ಇಬ್ಬರ ಸಾವಿಗೆ ಕಾರಣಳಾದ ಮಹಿಳೆ ಸರಸ್ವತಿ ಹಾಗೂ ಆಕೆಯ ಪ್ರಿಯಕರ ಶಿವಕುಮಾರ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಇದೀಗ ಮಹಿಳೆ ಸರಸ್ವತಿಯನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆಯ ಎಲೆಬೇತೂರಿನಲ್ಲಿ ಸಂಬಂಧಿಕರ ಮನೆಯಲ್ಲಿದ್ದ ಸರಸ್ವತಿಯನ್ನು ಬಂಧಿಸಿ ದಾವಣಗೆರೆ ಗ್ರಾಮಾಂತರ ಠಾಣೆಗೆ ಪೊಲೀಸರು ಕರೆತಂದಿದ್ದಾರೆ. ಅತ್ತ ಸರಸ್ವತಿ ಪ್ರಿಯಕರ ಶಿವಕುಮಾರ್ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ದಾವಣಗೆರೆಯ ಗುಮ್ಮನೂರು ಗ್ರಾಮದ ಹರೀಶ್ನನ್ನು ಮದುವೆಯಾಗಿದ್ದ ಸರಸ್ವತಿ ಮದುವೆಯಾದ ಕೇವಲ 45 ದಿನಕ್ಕೆ ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಳು. ಈ ಘಟನೆಯಿಂದ ತೀವ್ರವಾಗಿ ಮನನೊಂದಿದ್ದ ಪತಿ ಹರೀಶ್, ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದನು. ಅತ್ತ, ಇವರಿಬ್ಬರಿಗೂ ಮದುವೆ ಮಾಡಿಸಿದ್ದ ಸರಸ್ವತಿಯ ಸೋದರ ಮಾವ ಕೂಡಾ ಆತ್ಮಹತ್ಯೆಗೆ ಶರಣಾಗಿದ್ದರು. ಈ ಘಟನೆ ಇಡೀ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು.
ಇದೀಗ ಇಬ್ಬರ ಸಾವಿಗೆ ಕಾರಣವಾಗಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಸವರಾಜ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದ್ದು, ಪ್ರಾಥಮಿಕ ವಿಚಾರಣೆ ನಂತರ ಮೆಡಿಕಲ್ ಚೆಕ್ ಅಪ್ ಮಾಡಿಸಿ ಬಳಿಕ ಆಕೆಯನ್ನು ಜಡ್ಜ್ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ. ನಂತರ ಶಿವಮೊಗ್ಗ ಅಥವಾ ಚಿತ್ರದುರ್ಗ ಮಹಿಳಾ ಸೆಲ್ಗೆ ಕರೆದೊಯ್ಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇನ್ನು, ಸರಸ್ವತಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ಪ್ರಿಯಕರ ಶಿವಕುಮಾರ್ ನಾಪತ್ತೆಯಾಗಿದ್ದಾನೆ. ಸರಸ್ವತಿ ಪ್ರಿಯಕರ ಶಿವಕುಮಾರ್ ಜೊತೆ ಸೋದರ ಮಾವ ಗಣೇಶ್, ಸರಸ್ವತಿ ಚಿಕ್ಕಮ್ಮ ಅಂಜಿನಮ್ಮ ನಾಪತ್ತೆಯಾಗಿದ್ದು, ಶಿವಕುಮಾರಗಾಗಿ ದಾವಣಗೆರೆ ಪೊಲೀಸರು ಬಲೆ ಬೀಸಿದ್ದಾರೆ.

