ಬೆಂಗಳೂರು: ಕರ್ನಾಟಕದಲ್ಲಿ(Karnataka) ತಲೆದೊರೆಯುವ ಮಳೆ ಕೊರತೆ(Lack of rain) ಹಾಗೂ ಬರದ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಭಾನುವಾರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಒಗಳಿಗೆ ಮಹತ್ವದ ಸಭೆ ನಡೆಸಿದ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(CM D.K. Shivakumar) ಅಧ್ಯಕ್ಷತೆಯಲ್ಲಿ ತುರ್ತು ಸಚಿವ ಸಂಪುಟ ಸಭೆ ನಿಗದಿಯಾಗಿದೆ.

ಕಳೆದ ಕೆಲವು ದಿನಗಳಿಂದ ಸಚಿವ ಸಂಪುಟ ವಿಸ್ತರಣೆ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟಿದ್ದ ಈ ಮಹತ್ವದ ಸಭೆ ಇಂದು ನಡೆಯುತ್ತಿದೆ. ಬರ ಪರಿಸ್ಥಿತಿಯಿಂದ ಕಂಗಾಲಾಗಿರುವ ರೈತರಿಗೆ ಸರ್ಕಾರದಿಂದ ದೊಡ್ಡ ಮಟ್ಟದ ಪರಿಹಾರ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ.

ಜಿಲ್ಲಾಧಿಕಾರಿಗಳ ಸಭೆಯ ಪ್ರಮುಖಾಂಶಗಳ ಚರ್ಚೆ :

ಇಂದು ಮಧ್ಯಾಹ್ನ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ, ಜಿಲ್ಲಾಧಿಕಾರಿಗಳ ಸಭೆಯಲ್ಲಿ ಸಂಗ್ರಹಿಸಲಾದ ಪ್ರಮುಖಾಂಶಗಳು ಮತ್ತು ಗ್ರೌಂಡ್ ರಿಪೋರ್ಟ್‌ಗಳ ಕುರಿತು ಸುದೀರ್ಘ ಸಮಾಲೋಚನೆ ನಡೆಯಲಿದೆ. ರಾಜ್ಯದ ಯಾವ ಜಿಲ್ಲೆಗಳಲ್ಲಿ ಪರಿಸ್ಥಿತಿ ತೀರಾ ಗಂಭೀರವಾಗಿದೆ, ಕುಡಿಯುವ ನೀರು ಮತ್ತು ಮೇವು ಕೊರತೆ ಎಲ್ಲಿದೆ ಎಂಬುದರ ಸಂಪೂರ್ಣ ಚಿತ್ರಣವನ್ನು ಈ ಸಭೆಯಲ್ಲಿ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

ಬರಪೀಡಿತ ತಾಲೂಕುಗಳ ಅಧಿಕೃತ ಘೋಷಣೆ? :

ರಾಜ್ಯದಲ್ಲಿ ತೀವ್ರ ಪ್ರಮಾಣದಲ್ಲಿ ಮಳೆ ಕೊರತೆ ಎದುರಿಸುತ್ತಿರುವ ತಾಲೂಕುಗಳನ್ನು ಅಧಿಕೃತವಾಗಿ ‘ಬರಪೀಡಿತ ತಾಲೂಕುಗಳು’ ಎಂದು ಘೋಷಿಸುವ ನಿರೀಕ್ಷೆಯಿದೆ. ವೈಜ್ಞಾನಿಕ ವರದಿಗಳು ಮತ್ತು ಮಳೆಯ ಅಂಕಿ-ಅಂಶಗಳನ್ನು ಆಧರಿಸಿ ಈ ತಾಲೂಕುಗಳ ಪಟ್ಟಿಯನ್ನು ಅಂತಿಮಗೊಳಿಸಿ, ಅಲ್ಲಿನ ರೈತರಿಗೆ ತಕ್ಷಣದ ನೆರವು ನೀಡಲು ಸರ್ಕಾರ ಮುಂದಾಗಿದೆ.

ರಾಜ್ಯದಲ್ಲಿ ಉಂಟಾಗಿರುವ ಬರದ ತೀವ್ರತೆಯನ್ನು ನಿಭಾಯಿಸಲು ಮತ್ತು ರೈತರಿಗೆ ಹೆಚ್ಚುವರಿ ಪರಿಹಾರ ಒದಗಿಸಲು ರಾಜ್ಯ ಸರ್ಕಾರ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಕೇಂದ್ರದ ಅಧ್ಯಯನ ತಂಡವನ್ನು ರಾಜ್ಯಕ್ಕೆ ಕಳುಹಿಸುವಂತೆ ಕೋರಲಾಗಿದೆ. ಈ ಕುರಿತು ಕೇಂದ್ರ ಸರ್ಕಾರದೊಂದಿಗೆ ನಡೆದ ಮಾತುಕತೆ ಮತ್ತು ರಾಜ್ಯದ ಮುಂದಿನ ಯೋಜನೆಗಳನ್ನು ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಗುತ್ತದೆ.