Select Page

Advertisement

ಪಂಚ ಪೀಠಗಳಿಂದ ದೇಶಕ್ಕೆ ಶಕ್ತಿ : ಡಿ.ಕೆ ಶಿವಕುಮಾರ್

ಪಂಚ ಪೀಠಗಳಿಂದ ದೇಶಕ್ಕೆ ಶಕ್ತಿ : ಡಿ.ಕೆ ಶಿವಕುಮಾರ್


ಚಿಕ್ಕೋಡಿ : ರಂಭಾಪುರಿ, ಉಜ್ಜಯಿನಿ, ಕಾಶೀ, ಶ್ರೀಶೈಲ ಸೇರಿದಂತೆ ನಮ್ಮ ಪಂಚ ಪೀಠದ ಶ್ರೀಗಳು ಇಡೀ ದೇಶಕ್ಕೆ ಶಕ್ತಿ ನೀಡುತ್ತಾ ಬಂದಿದ್ದಾರೆ. ಇವುಗಳ ಮಾರ್ಗದರ್ಶನದಲ್ಲಿ ನಾವು ನೆಮ್ಮದಿಯಾಗಿ ಬದುಕುತ್ತಿದ್ದೇವೆ. ನಾವು ಈ ಧರ್ಮ ಪೀಠಗಳನ್ನು ಉಳಿಸಿಕೊಂಡು, ಕಾಪಾಡಿಕೊಂಡು ಹೋಗಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅಭಿಪ್ರಾಯಪಟ್ಟರು.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನಲ್ಲಿ ಗುರುವಾರ ನಡೆದ ವೀರಶೈವ ಲಿಂಗಾಯತ ಧರ್ಮೋತ್ಥಾನ ಸಮ್ಮೇಳನ ಹಾಗೂ ರಾಜಗೋಪುರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಮಾಜಕ್ಕೆ ಪಂಚ ಪೀಠಗಳ ಮಾರ್ಗದರ್ಶನ ಅಗತ್ಯವಿದ್ದು, ನಾವು ಈ ಮಠಗಳಿಗೆ ಪ್ರೋತ್ಸಾಹ ನೀಡಬೇಕು. ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು” ಎಂದು ಕರೆ ನೀಡಿದರು.

ದೊಡ್ಡ ಧರ್ಮ ಪೀಠಗಳ ಧರ್ಮಗುರುಗಳು ಸೇರಿರುವ ಇಂತಹ ಪವಿತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನ್ನ ಭಾಗ್ಯ. ಅಮ್ಮನ ನೆನಪು ಪ್ರೀತಿಯ ಮೂಲ, ದೇವರ ನೆನಪು ಭಕ್ತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ಈ ಮೂರರ ನೆನಪು ಮನುಷ್ಯತ್ವಕ್ಕೆ ಮೂಲ. ಮನುಷ್ಯತ್ವ ಮೋಕ್ಷಕ್ಕೆ ಮೂಲ ಎಂದು ಹೇಳಿದರು.

ಶ್ರೀಗಳು ಇಲ್ಲಿಂದ ಬೆಳೆದು, ಈ ಭಾಗದ ಅಭಿವೃದ್ಧಿ ಮಾಡಿ ಶ್ರೀಶೈಲ ಮಠಕ್ಕೆ ಹೋಗಿ ಧರ್ಮ ಉಳಿಸುವ ಪ್ರಯತ್ನ ಮಾಡುತ್ತಿರುವುದು ನಮಗೆ ಶಕ್ತಿ ತುಂಬಿದೆ. ಮನುಷ್ಯನಿಗೆ ಧರ್ಮ, ದೇವರು ಬೇಕು. ಇಲ್ಲದಿದ್ದರೆ ಜೀವನ ಹಾಗೂ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ. ಬದುಕಿಗೆ ಅರ್ಥವು ಇರುವುದಿಲ್ಲ. ನಿಂಬೆಗಿಂತ ಶ್ರೇಷ್ಠವಾದ ಹುಳಿ, ದುಂಬಿಗಿಂತ ಶ್ರೇಷ್ಠವಾದ ಕಪ್ಪು ಬಣ್ಣ, ಶಿವನಿಗಿಂತ ಶ್ರೇಷ್ಠವಾದ ದೇವರು, ನಂಬಿಕೆಗಿಂತ ದೊಡ್ಡ ಗುಣ ಬೇರೊಂದಿಲ್ಲ. ಧರ್ಮ ಇಂದು ನಮ್ಮನ್ನೆಲ್ಲ ಇಲ್ಲಿ ಸೇರಿಸಿದೆ. ಭಕ್ತ ಹಾಗೂ ಭಗವಂತ ನಡುವೆ ವ್ಯವಹಾರ ನಡೆಯುವ ಜಾಗ ದೇವಾಲಯ. ನಾವು ಇಂತಹ ದೇವಾಲಯದಲ್ಲಿ ಕೂತು ಪವಿತ್ರವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನಮ್ಮ ನಿಮ್ಮ ಭಾಗ್ಯ. ಸಚಿವ ಸಂಪುಟ ಸಭೆ ಇದ್ದರೂ ಅದನ್ನು ಸಂಜೆಗೆ ನಿಗದಿ ಮಾಡಿ ಎಂದು ಹೇಳಿ ಈ ಕಾರ್ಯಕ್ರಮಕ್ಕೆ ಬಂದಿರುವೆ ಎಂದು ಹೇಳಿದರು.

ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ ಈ ಹುಟ್ಟು ಸಾವಿನ ನಡುವೆ ನಾವು ಏನು ಮಾಡುತ್ತೇವೆ ಎಂಬುದು ಬಹಳ ಮುಖ್ಯ ಎಂದು ಇಂತಹ ಧರ್ಮ ಕಾರ್ಯಗಳಿಗೆ ಹುಕ್ಕೇರಿ ಅವರು ಸಹಕಾರ ನೀಡುತ್ತಾ ಬಂದಿದ್ದಾರೆ. ಪ್ರಭಾಕರ್ ಕೊರೆ ಅವರು ಕೂಡ ರಾಜ್ಯದಲ್ಲಿ ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಶಕ್ತಿ ನೀಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಿದ್ದಾರೆ. ನಾನು ಇಲ್ಲಿಗೆ ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಬಂದಿಲ್ಲ. ಶ್ರೀಗಳು ಈ ಕ್ಷೇತ್ರದಲ್ಲಿ ಮಾಡುತ್ತಿರುವ ಕೆಲಸ ತಿಳಿದು ಬಂದಿದ್ದೇನೆ. ಅವರು ಹೇಳಿದಂತೆ ನಾನು ವೀರ ಗಂಗಾಧರೇಶ್ವರ ಅಜ್ಜಯ್ಯ ಅವರ ಪರಮ ಭಕ್ತ. ಅವರ ಮಾರ್ಗದರ್ಶನದಲ್ಲಿ ನಾನು ಹೆಜ್ಜೆ ಹಾಕುತ್ತಿದ್ದೇನೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಅವರು ಸಂದೇಶ ನೀಡಿದ್ದಾರೆ. ನಾವು ಅದೇ ತತ್ವದಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ” ಎಂದರು.

“ಈ ಮಠ ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ. ನಾವು ಹುಟ್ಟುವಾಗ ಇಂತಹುದೆ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟುವುದಿಲ್ಲ. ಧರ್ಮ ಯಾವುದಾದರೂ ತತ್ವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೆ, ಕರ್ಮ ಹಲವಾದರೂ ನಿಷ್ಠೆಯೊಂದೆ, ದೇವನೊಬ್ಬ ನಾಮ ಹಲವು. ನಾವು ಇದರಲ್ಲಿ ನಂಬಿಕೆ ಇಟ್ಟಿದ್ದೇವೆ. ಎಲ್ಲಾ ಧರ್ಮಗಳು ಒಂದೇ ಆಚಾರ ವಿಚಾರ ಸಾರುತ್ತವೆ. ಮಠಗಳು ಅವುಗಳನ್ನು ಕಾಪಾಡಿಕೊಂಡು ಬರುತ್ತಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಂಭಾಪುರಿ ಪೀಠದ ಡಾ. ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಉಜ್ಜಯನಿ ಮಠದ ಶ್ರೀ ಡಾ ಸಿದ್ದಲಿಂಗ ಶಿವಾಚಾರ್ಯ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಶೈಲ ಮಠದ ಶ್ರೀ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕಾಶಿ ಮಹಾಪೀಠದ ಡಾ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಡಾ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಾಸಕರಾದ ಗಣೇಶ್ ಹುಕ್ಕೇರಿ, ಪ್ರಕಾಶ್ ಹುಕ್ಕೇರಿ, ಶಿಕ್ಷಣ ತಜ್ಞ ಡಾ ಪ್ರಭಾಕರ್ ಕೋರೆ ಮತ್ತಿತರರು ಉಪಸ್ಥಿತರಿದ್ದರು.


************

ಚಿಕ್ಕೋಡಿ ಜಿಲ್ಲೆ ಆಗಬೇಕು ಎಂಬ ಆಸೆ ನನಗೂ ಇದೆ. ಆದಷ್ಟು ಬೇಗ ನಾವು ತೀರ್ಮಾನ ಮಾಡುತ್ತೇವೆ. ಪ್ರಕಾಶ್ ಹುಕ್ಕೇರಿ ಹಾಗೂ ಗಣೇಶ್ ಹುಕ್ಕೇರಿ ಅವರು ಈ ಭಾಗದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಇಟ್ಟಿರುವ ಎಲ್ಲಾ ಬೇಡಿಕೆ ಈಡೇರಿಸಲು ನಾನು ಬದ್ಧನಾಗಿದ್ದೇನೆ.

ಡಿ.ಕೆ ಶಿವಕುಮಾರ
ಉಪಮುಖ್ಯಮಂತ್ರಿ

************


Advertisement

Leave a reply

Your email address will not be published. Required fields are marked *

error: Content is protected !!