
8 ನೇ ತರಗತಿ ಓದಿ ಲೋಕಾಯುಕ್ತ ಅಧಿಕಾರಿಯಾಗಿ ನಟನೆ ; ಆರೋಪಿ ಅಂದರ್

ಚಿಕ್ಕಬಳ್ಳಾಪುರ : 8 ನೇ ತರಗತಿ ಓದಿದ್ದು ತಾನೂ ಲೋಕಾಯುಕ್ತ ಅಧಿಕಾರಿ ಎಂದು ಹೇಳಿಕೊಂಡು ಮಹಿಳಾ ಅಧಿಕಾರಿಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚನ್ನಕೇಶವ ರೆಡ್ಡಿ (24) ಬಂಧಿತ ಆರೋಪಿ. ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಚಿರುವುಮುನೆಪ್ಪಗಾರಿಪಲ್ಲಿಯ ನಿವಾಸಿಯಾದ ಈತ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರಸಭೆಯ ಪೌರಾಯುಕ್ತೆ ಗೀತಾ ಮೊಬೈಲ್ ನಂಬರ್ ಗೆ ಕರೆ ಮಾಡಿ ನಿಮ್ಮ ವಿರುದ್ಧ ದೂರು ಬಂದಿದೆ ಎಂದು ಹೇಳಿದ್ದ.
ನಿಮ್ಮ ನಗರಸಭೆಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ಮಾಡಿದ್ದೀರಿ, ನಿಮ್ಮ ಮೇಲೆ ಲೋಕಾಯುಕ್ತ ಕೇಂದ್ರ ಕಚೇರಿಗೆ ದೂರು ಬಂದಿದೆ. ನಿಮ್ಮ ಕಚೇರಿ ಮೇಲೆ ರೇಡ್ ಮಾಡಿಬಿಡ್ತೀವಿ ಅಂತ ಹೆದರಿಸಿದ್ದಾನೆ. ರೇಡ್ ಮಾಡಬಾರದು ಅಂದ್ರೆ ನಾವ್ ಹೇಳೀದಷ್ಟು ದುಡ್ಡು ಅರ್ಧ ಗಂಟೆಯಲ್ಲಿ ಕೊಡಬೇಕು ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ.
ವಂಚಕನ ಮಾತುಗಳಿಗೆ ಹೆದರದ ಪೌರಾಯುಕ್ತೆ ಗೀತಾ ಚಿಕ್ಕಬಳ್ಳಾಪುರ ಲೋಕಾಯುಕ್ತ ಸಂಸ್ಥೆಯ ಎಸ್ಪಿಯೊಂದಿಗೆ ಮಾತನಾಡಿ, ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು 10 ತಿಂಗಳ ನಂತರ ಆರೋಪಿ ಚನ್ನಕೇಶವರೆಡ್ಡಿಯನ್ನ ಬಂಧಿಸಿದ್ದಾರೆ.