ಸಿಎಂ ಸಿದ್ದರಾಮಯ್ಯ ಬಜೆಟ್ ನಿಂದ ಬೆಳಗಾವಿಗೆ ಸಿಕ್ಕಿದ್ದೇನು…?
ಬೆಳಗಾವಿ : ಐತಿಹಾಸಿಕ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಗೆ ಬೆಳಗಾವಿ ಜಿಲ್ಲೆಗೆ ಕೆಲವೊಂದು ಸಿಹಿ ನೀಡಿದ್ದಾರೆ. ದಶಕಗಳ ಬೇಡಿಕೆ ಇದ್ದ ಆರೋಗ್ಯ, ಕೃಷಿ ಸೇರಿದಂತೆ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾಡಿರುವ ಘೋಷಣೆಗಳಿಗೆ ಜಿಲ್ಲೆಯ ಜನ ಸಂತಸ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಅಥಣಿ ತಾಲೂಕಿನಲ್ಲಿ 50 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಇನ್ನೂ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಒಟ್ಟಾರೆ 3,000 ಹೆಕ್ಟೇರ್ ಪ್ರದೇಶದಲ್ಲಿ ಸಮಗ್ರ ಮಣ್ಣು ಮತ್ತು ನೀರಿನ ನಿರ್ವಹಣೆ, ಸಮರ್ಪಕ ತ್ಯಾಜ್ಯ ನಿರ್ವಹಣೆ, ನೀರಿನ ಬಳಕೆ ಮತ್ತು ಸಮತೋಲನ ಪೋಷಕಾಂಶ ನಿರ್ವಹಣೆಯನ್ನು ಸಕ್ಕರೆ ಕಾರ್ಖಾನೆಗಳ ಸಹಯೋಗದೊಂದಿಗೆ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.
ರಾಮದುರ್ಗ ಹಾಗೂ ಸವದತ್ತಿ ತಾಲೂಕು ಮಟ್ಟದ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಒಟ್ಟು ಹತ್ತು ಆಸ್ಪತ್ರೆಗೆ ಸೇರಿ 650 ಕೋಟಿ ರೂ. ಮೀಸಲಿಡಲಾಗಿದೆ. ಇನ್ನೂ
ಕಳಸಾ-ಬಂಡೂರಾ ನಾಲಾ ತಿರುವು ಯೋಜನೆಯಡಿ 3.9 ಟಿಎಂಸಿ ನೀರಿನ ಬಳಕೆಗಾಗಿ ಕೇಂದ್ರ ಸರ್ಕಾರದಿಂದ ತೀರುವಳಿಗಳನ್ನು ನಿರೀಕ್ಷಿಸಿ ಈಗಾಗಲೇ ಯೋಜನಾ ಕಾಮಗಾರಿಗಳನ್ನು ಕೆಲವು ಷರತ್ತುಗಳೊಂದಿಗೆ ಗುತ್ತಿಗೆ ವಹಿಸಲಾಗಿದೆ. ಕೇಂದ್ರ ಸರ್ಕಾರದ ಅನುಮೋದನೆ ದೊರೆತ ಕೂಡಲೇ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದರು.
ಮೈಸೂರು ಮತ್ತು ಬೆಳಗಾವಿಯಲ್ಲಿರುವ ವಿಶೇಷ ಮಕ್ಕಳ ಸರ್ಕಾರಿ ವಸತಿಯುತ ಶಾಲೆಗಳನ್ನು ಉನ್ನತೀಕರಿಸಲು ಐದು ಕೋಟಿ ರೂ. ನೀಡಲಾಗುವುದು. ಇವುಗಳ ನಿರ್ವಹಣೆಯನ್ನು ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಅವರು ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರದ ವತಿಯಿಂದ ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯಲ್ಲಿ ಹಾಗೂ ಖಾನಾಪುರ ತಾಲೂಕಿ ನಂದಗಡದಲ್ಲಿ ₹ 28 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೊಳ್ಳುವುದು. ಬೆಳಗಾವಿಯಲ್ಲಿ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುವುದು.
ಕಿಯೋಕ್ಸ್ ವತಿಯಿಂದ ಬೆಳಗಾವಿಯಲ್ಲಿ ಪ್ಲಗ್ ಆ್ಯಂಡ್ ಪ್ಲೇ ಸೌಲಭ್ಯಗಳನ್ನೊಳಗೊಂಡ ಹೊಸ ಜಾಗತಿಕ ತಂತ್ರಜ್ಞಾನ ಕೇಂದ್ರ ಸ್ಥಾಪನೆ.
ಬೆಳಗಾವಿ ಜಿಲ್ಲೆಯ ನೀರಾವರಿ ಮತ್ತು ಜಲ ಸಂರಕ್ಷಣಾ ಯೋಜನೆಗಳಿಗೆ ₹ 600 ಕೋಟಿ ಅನುದಾನ ಕಾಯ್ದಿರಿಸಲಾಗಿದೆ. ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಗೆ ₹ 1000 ಕೋಟಿ ಕಾಯ್ದಿರಿಸಲಾಗಿದೆ.
ಬೆಳಗಾವಿ ಮತ್ತು ಧಾರವಾಡ ನಡುವಿನ ಸಂಪರ್ಕವನ್ನು ಬಲಪಡಿಸಲು ಹೊಸ ಎಕ್ಸ್‌ಪ್ರೇಸ್ ಸೇತುವೆ ನಿರ್ಮಾಣಕ್ಕೆ ₹1200 ಕೋಟಿ ನಿಗದಿಪಡಿಸಲಾಗಿದೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಲು ₹850 ಕೋಟಿ ನಿಗದಿಪಡಿಸಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಕೃಷಿ ತಾಂತ್ರಿಕ ಹಬ್ ಅನ್ನು ಸ್ಥಾಪಿಸಲು ₹ 500 ಕೋಟಿ ನಿಗದಿಪಡಿಸಲಾಗಿದೆ.
ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ ₹ 199 ಕೋಟಿ ಘೋಷಣೆ ಮಾಡಲಾಗಿದೆ. ಸೇವಾದಳ ಸಂಸ್ಥಾಪಕ, ಸ್ವಾತಂತ್ರ್ಯ ಸೇನಾನಿ ಪದ್ಮಭೂಷಣ ಡಾ. ನಾ.ಸು. ಹರ್ಡಿಕರ ಅವರ ಸ್ಮಾರಕವನ್ನು ಘಟಪ್ರಭಾ ಆರೋಗ್ಯ ಧಾಮದಲ್ಲಿ ನಿರ್ಮಿಸಲು ₹ 2 ಕೋಟಿ ಅನುದಾನ ಕಾಯ್ದಿರಿಸಲಾಗಿದೆ.
ಡಿಸಿ ಕಚೇರಿ ಕಾಂಪ್ಲೆಕ್ಸ್ ನಿರ್ಮಾಣಕ್ಕೆ 55 ಕೋಟಿ ರೂ
ಬೆಳಗಾವಿ ನಗರದಲ್ಲಿ 55 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡವನ್ನು ನಿರ್ಮಾಣ ಮಾಡಲು ಬಜೆಟ್ ನಲ್ಲಿ 55 ಕೋಟಿ ರೂ ಅನುದಾನ ನೀಡಲಾಗಿದೆ.
ಬೆಳಗಾವಿಯಲ್ಲಿರುವ ವಿಶೇಷ ಮಕ್ಕಳ ಸರ್ಕಾರಿ ವಸತಿಯುತ ಶಾಲೆಗಳನ್ನು ಉನ್ನತೀಕರಿಸಲು 5 ಕೋಟಿ ರೂಪಾಯಿ ಅನುದಾನವನ್ನು ನೀಡಲಾಗಿದೆ.
ಪತ್ರಕರ್ತರಿಗೂ ಬಂಪರ್
ಮಾನ್ಯತೆ ಹೊಂದಿದೆ ಪತ್ರಕರ್ತರ ಕುಟುಂಬದವರಿಗೆ ಐದು ಲಕ್ಷ ರೂ ಗಳ ಆರೋಗ್ಯ ವಿಮೆ, ಜೊತೆಗೆ 60 ವರ್ಷ ವಯೋಮಿತಿ ಹೊಂದಿದ ಪತ್ರಕರ್ತರಿಗೆ ಪ್ರತಿ ತಿಂಗಳು ನೀಡುವ 12 ಸಾವಿರ ಮಾಶಾಸನ 15 ಸಾವರ ರೂ ಗೆ ಏರಿಕೆಯಾಗಿದೆ.


