ತಂದೆಗಾಗಿ ಮಗನ ತ್ಯಾಗ ; ಮಹತ್ವದ ಮೈಲಿಗಲ್ಲು ಸಾಧಿಸಿದ ಕೆಎಲ್ಇ
ಬೆಳಗಾವಿ : ಲಿವರ್ ವೈಫಲ್ಯದಿಂದ ಬಳಲುತ್ತಿದ್ದ ತಂದೆಗೆ ಮಗನ ಲಿವರ್ ಭಾಗವನ್ನು ಜೋಡಿಸುವ ಮೂಲಕ ಯಶಸ್ವಿ ಕಸಿ ಮಾಡುವಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಗ್ಯಾಸ್ಟ್ರೋಎಂಟ್ರಾಲಾಜಿ ತಜ್ಞವೈದ್ಯರ ತಂಡ ಯಶಸ್ವಿಯಾಗಿದೆ.
ರಾಯಬಾಗ ತಾಲೂಕಿನ ರೈತ ಲಿವರ್ ವೈಫಲ್ಯದಿಂದ ಬಳಲುತ್ತಿದ್ದರು. ಲಿವರ್ ಕಸಿ ಶಸ್ತ್ರಚಿಕಿತ್ಸೆ ಅನಿವಾರ್ಯ ಹಿನ್ನಲೆಯಲ್ಲಿ ಇವರ ಮಗ 26 ವರ್ಷದ ಯುವಕ ತನ್ನ ಲಿವರ್ ಭಾಗವನ್ನು ತಂದೆಗೆ ದಾನ ಮಾಡಿದರು. ಇಂತಹ ಪರಿಸ್ಥಿತಿಯಲ್ಲಿ ಕೆಎಲ್ಇ ಸಂಸ್ಥೆ ವೈದ್ಯರು ಯಶಸ್ವಿಯಾಗಿ ಜೀವಂತ ಲಿವರ್ ಕಸಿ ಮಾಡುವ ಮೂಲಕ ಯಶಸ್ವಿಯಾಗಿದ್ದಾರೆ.
ಈ ಕುರಿತು ಶನಿವಾರ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿದ ಕೆಎಲ್ಇ ವೈದ್ಯಕೀಯ ಸಂಸ್ಥೆಯ ಗ್ಯಾಸ್ಟ್ರೋಎಂಟ್ರಾಲಾಜಿಸ್ಟ್ ಹಾಗೂ ಲಿವರ್ ತಜ್ಞವೈದ್ಯರಾದ ಡಾ. ಸಂತೋಷ ಹಜಾರೆ ಮಾತನಾಡಿ. ಕೊನೆಯ ಹಂತದ ಲಿವರ್ ವೈಫಲ್ಯದಿಂದ ಬಳಲುತ್ತಿದ್ದ ತನ್ನ ತಂದೆಯ ಜೀವವನ್ನು ಉಳಿಸಲು ಅವರ 29 ವರ್ಷದ ಮಗ ತನ್ನ ಲಿವರ್‌ನ ಸ್ವಲ್ಪ ಭಾಗವನ್ನು ದಾನ ಮಾಡಿದ್ದರು. ಶಸ್ತ್ರಚಿಕಿತ್ಸೆಯ ನಂತರ ದಾನಿ ಮತ್ತು ದಾನ ಪಡೆದ ರೋಗಿ ಗುಣಮುಖರಾಗಿದ್ದಾರೆ. ದಾನಿ 8 ನೇ ದಿನಕ್ಕೆ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿದ್ದಾರೆ ಎಂದರು.
ಅತ್ಯಂತ ಸಂಕೀರ್ಣ ಮತ್ತು ತಾಂತ್ರಿಕತೆಯಿಂದ ಕೂಡಿದ ಶಸ್ತ್ರಚಿಕಿತ್ಸೆಯನ್ನು ಬೆಂಗಳೂರಿನ ಆಸ್ಟರ್ ಆಸ್ಪತ್ರೆಯ ಸಹಕಾರದೊಂದಿಗೆ ಮುಖ್ಯ ಲಿವರ್ ಟ್ರಾನ್ಸ್ಪ್ಲಾಂಟ್ ಶಸ್ತ್ರಚಿಕಿತ್ಸಕ ಡಾ. ಸೋನಲ್ ಅಸ್ತಾನಾ, ಡಾ. ವಚನ ಹುಕ್ಕೇರಿ ಹಾಗೂ ಡಾ. ರೋಮೆಲ್ ಎಸ್ ಅವರ ನೇತೃತ್ವದಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಗ್ಯಾಸ್ಟ್ರೋಎಂಟ್ರಾಲಾಜಿ ಲಿವರ್ ಶಸ್ತ್ರಚಿಕಿತ್ಸಕ ಡಾ. ಸುದರ್ಶನ್ ಚೌಗಲೆ ಮತ್ತು ಡಾ. ಕಿರಣ್ ಉರಬಿನಹಟ್ಟಿ ತಂಡವು ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದೆ ಎಂದರು.
ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ್ ಕೋರೆ ಮಾತನಾಡಿ. ಈ ಭಾಗದಲ್ಲಿ ಪ್ರಮುಖ ಬಹು ಅಂಗಾಂಗ ಕಸಿ ನೆರವೆರಿಸುವದರ ಜೊತೆಗೆ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಬೋಧನಾ ಸೌಲಭ್ಯ ಹೊಂದಿರುವ ರಾಜ್ಯದ ಏಕೈಕ ಆಸ್ಪತ್ರೆ ಇದಾಗಿದೆ. ಕರ್ನಾಟಕ ಅಲ್ಲದೇ, ಗೋವಾ ಮಹಾರಾಷ್ಟ್ರ ಹಾಗೂ ವಿವಿಧ ರಾಜ್ಯಗಳ ನಗರಗಳಿಂದಲೂ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ.
ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು,ನುರಿತ ನರ್ಸಿಂಗ್ ಸಿಬ್ಬಂದಿ, ಕೈಗೆಟಕುವ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿರುವದರಿಂದ ಇತ್ತಕಡೆ ರೋಗಿಗಳು ಹೆಚ್ಚಾಗಿ ಆಗಮಿಸುತ್ತಿದ್ದಾರೆ ಎಂದರು.
ಸಂಸ್ಥೆಯಲ್ಲಿ ಈವರೆಗೆ 101 ಕ್ಕೂ ಹೆಚ್ಚು ಮೂತ್ರಪಿಂಡ, 22 ಲಿವರ್ ಹಾಗೂ 14 ಹೃದಯ ಕಸಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಅಲ್ಲದೇ ಅಸ್ಥಿಮಜ್ಜೆ ಕಸಿ ನೆರವೇರಿಸಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಅಂಗಾಂಗ ಕಸಿ ಶಸ್ತçಚಿಕಿತ್ಸೆಯನ್ನು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯು ನೆರವೇರಿಸಿರುವ ಕೀರ್ತಿಗೆ ಭಾಜನವಾಗಿದೆ. ದೀರ್ಘಕಾಲ ನಡೆಯುವ ಕಸಿ ಶಸ್ತ್ರಚಿಕಿತ್ಸೆಗಳು ಸಾಮಾನ್ಯವಾಗಿ ಅತ್ಯಧಿಕ ವೆಚ್ಚ ತಗಲುತ್ತದೆ. ಬೆಂಗಳೂರಿನಂತ ನಗರಗಳಿಗೆ ಹೋಲಿಸಿದರೆ ನಮ್ಮಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಚಿಕಿತ್ಸೆ ನೆರವೇರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಗ್ಯಾಸ್ಟ್ರೋಎಂಟ್ರಾಲಾಜಿ ಶಸ್ತ್ರಚಿಕಿತ್ಸಕರಾದ ಡಾ. ಸುದರ್ಶನ ಚೌಗಲಾ, ಲೀವರ ಕಸಿ ಶಸ್ತ್ರಚಿಕಿತ್ಸಕರಾದ ಡಾ. ಸೋನಲ್ ಆಸ್ಥಾನಾ, ಡಾ. ವಚನ ಹುಕ್ಕೇರಿ ಕ್ಲಿನಿಕಲ್ ಸರ್ವಿಸ್ ನಿರ್ದೇಶಕರಾದ ಡಾ. ಮಾಧವ್ ಪ್ರಭು, ಅರವಳಿಕೆ ತಜ್ಞವೈದ್ಯರಾದ ಡಾ. ರಾಜೇಶ ಮಾನೆ ಆಡಳಿತಾಧಿಕಾರಿ ಡಾ. ಬಸವರಾಜ್ ಬಿಜರಗಿ ಅವರು ಉಪಸ್ಥಿತರಿದ್ದರು.

