ಮಲೇಷಿಯಾದಲ್ಲಿ ಉತ್ತರ ಕರ್ನಾಟಕ ಕಲರವ ; ರೊಟ್ಟಿ ಹಬ್ಬದ ಸಂಭ್ರಮ..!
ಮಲೇಷಿಯಾ : ಮಲೇಷಿಯಾದ ಕೌಲಾಲಂಪುರ ನಗರದಲ್ಲಿ ‘ನಾವು ನಮ್ಮ ಮಂದಿ’ ತಂಡದ ವತಿಯಿಂದ ಉತ್ತರ ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ “ರೊಟ್ಟಿ ಹಬ್ಬ 3.0 – ಮಿಲ್ಲೆಟ್ ಫೆಸ್ಟಿವಲ್” ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು.
ವಿದೇಶದಲ್ಲಿರುವ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಂದಾಗಿಸಿ, ಅವರ ಭಾಷೆ, ಸಂಸ್ಕೃತಿ, ಆಹಾರ ಪದ್ಧತಿ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಸ್ಮರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸಿ ತಮ್ಮ ಸಂಸ್ಕೃತಿಯ ಮೇಲಿನ ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮಕ್ಕೆ ಗದುಗಿನ ಹುಲಕೋಟಿಯ ರಾಮಕೃಷ್ಣ ವಿವೇಕಾನಂದ ಸೇವಾ ಪ್ರತಿಷ್ಠಾನಮ್ ಅಧ್ಯಕ್ಷರಾದ ಪೂಜ್ಯ ಶ್ರೀ ಸ್ವಾಮಿ ಶಿವಪ್ರಿಯಾನಂದ ಜಿ ಮಹಾರಾಜ್ ಅವರು ದಿವ್ಯ ಸಾನಿಧ್ಯ ವಹಿಸಿದ್ದರು. ಕನ್ನಡ ಸಂಸ್ಕೃತಿಗೆ ಗೌರವ ತಂದ ಕನ್ನಡಿಗರು ಕಾರ್ಯಕ್ರಮವನ್ನು ಉದ್ಘಾಟಿಸಿದ ಬೀಳಗಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಹಟ್ಟಿ ಚಿನ್ನದ ಗಣಿ ಕಂಪನಿಯ ಅಧ್ಯಕ್ಷರಾದ ಜೆ. ಟಿ. ಪಾಟೀಲರು, “ಭಾರತೀಯರು, ವಿಶೇಷವಾಗಿ ಕನ್ನಡಿಗರು, ಎಲ್ಲಿ ಹೋದರೂ ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮರೆಯದೆ ಅದಕ್ಕೆ ಗೌರವ ತಂದುಕೊಡುವ ಕಾರ್ಯ ಮಾಡುತ್ತಿದ್ದಾರೆ.
ವಿದೇಶದಲ್ಲಿದ್ದರೂ ತಮ್ಮ ಭಾಷೆ, ಆಹಾರ ಪದ್ಧತಿ ಹಾಗೂ ಸಂಪ್ರದಾಯಗಳನ್ನು ಉಳಿಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ಸಂಗತಿ” ಎಂದು ಹೇಳಿದರು. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದೇಶದಲ್ಲಿರುವ ಕನ್ನಡಿಗರ ನಡುವೆ ಒಗ್ಗಟ್ಟು ಮತ್ತು ಸಂಸ್ಕೃತಿಯ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದೇಶದಲ್ಲಿರುವ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ಅವರ ನಡುವೆ ಒಗ್ಗಟ್ಟು ಮತ್ತು ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ. ಜೊತೆಗೆ ಕರ್ನಾಟಕದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಜಗತ್ತಿನ ವಿವಿಧ ಭಾಗಗಳಿಗೆ ಪರಿಚಯಿಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರವಹಿಸುತ್ತವೆ ಎಂದು ಅವರು ಹೇಳಿದರು.
ವಿದೇಶದಲ್ಲಿರುವ ಕನ್ನಡಿಗರು ತಮ್ಮ ಮೂಲ ಸಂಸ್ಕೃತಿಯೊಂದಿಗೆ ನಂಟನ್ನು ಕಾಪಾಡಿಕೊಂಡು ಹೋಗುತ್ತಿರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಷಯ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ “ವಿದೇಶದಲ್ಲಿ ಆಹಾರ ಸಂಸ್ಕೃತಿ ಮತ್ತು ಆಧ್ಯಾತ್ಮ – ಒಂದು ವಿಶ್ಲೇಷಣೆ” ಎಂಬ ವಿಷಯದ ಕುರಿತು ಸ್ವಾಮಿ ಶಿವಪ್ರಿಯಾನಂದ ಜಿ ಮಹಾರಾಜ್ ಅವರು ಮನನೀಯ ಪ್ರವಚನ ನೀಡಿದರು. ತಮ್ಮ ಭಾಷಣದಲ್ಲಿ ಅವರು ಭಾರತೀಯ ಸಂಸ್ಕೃತಿಯಲ್ಲಿ ಆಹಾರ ಮತ್ತು ಆಧ್ಯಾತ್ಮದ ನಡುವಿನ ಅವಿನಾಭಾವ ಸಂಬಂಧವನ್ನು ವಿವರಿಸಿದರು. ಭಾರತೀಯ ಪರಂಪರೆಯಲ್ಲಿ ಆಹಾರವನ್ನು ಕೇವಲ ದೇಹದ ಪೋಷಣೆಗೆ ಮಾತ್ರವಲ್ಲದೆ ಮನಸ್ಸು ಮತ್ತು ಚಿತ್ತದ ಶುದ್ಧಿಗೆ ಕಾರಣವಾಗುವ ಸಾಧನವಾಗಿಯೂ ಪರಿಗಣಿಸಲಾಗಿದೆ ಎಂದು ಅವರು ಹೇಳಿದರು.
ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಉಲ್ಲೇಖಿಸಿದ ಸ್ವಾಮೀಜಿಗಳು, “ಧರ್ಮದ ರಹಸ್ಯವು ಅದರ ಆಚರಣೆಯಲ್ಲಿ ಇದೆ; ಸಿದ್ಧಾಂತದಲ್ಲಿ ಅಲ್ಲ” ಎಂಬ ಸಂದೇಶವನ್ನು ನೆನಪಿಸಿದರು. ಮಾನವ ಸೇವೆಯನ್ನೇ ಪರಮ ಧರ್ಮವೆಂದು ಸ್ವಾಮಿ ವಿವೇಕಾನಂದರು ಬೋಧಿಸಿದ್ದು, ಆತ್ಮವಿಶ್ವಾಸ, ಶಿಸ್ತು ಮತ್ತು ನಿಸ್ವಾರ್ಥ ಸೇವೆಯ ಮೂಲಕ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ಅವರು ತಿಳಿಸಿದರು.
ಇಂದಿನ ಶತಮಾನದಲ್ಲಿಯೂ ಸ್ವಾಮಿ ವಿವೇಕಾನಂದರ ಚಿಂತನೆಗಳು ಅತ್ಯಂತ ಪ್ರಸ್ತುತವಾಗಿದ್ದು, ಯುವಜನತೆಗೆ ಆತ್ಮವಿಶ್ವಾಸ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಅವು ಮಹತ್ವದ ಪಾತ್ರವಹಿಸುತ್ತವೆ ಎಂದು ಅವರು ಹೇಳಿದರು. ಜೀವನದಲ್ಲಿ ಸರಳತೆ, ಶುದ್ಧತೆ ಮತ್ತು ಮಿತಾಹಾರವನ್ನು ಪಾಲಿಸುವುದು ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೂ, ಆಧ್ಯಾತ್ಮಿಕ ಬೆಳವಣಿಗೆಯಿಗೂ ಸಹಕಾರಿಯಾಗುತ್ತದೆ ಎಂಬುದನ್ನು ಅವರು ವಿವರಿಸಿದರು.
ಮಹಿಳಾ ದಿನಾಚರಣೆಯ ವಿಶೇಷ ಸಂದೇಶ : ಮಹಿಳಾ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಸ್ವಾಮೀಜಿಗಳು, ಶ್ರೀ ಮಾತೆ ಶಾರದಾದೇವಿ ಅವರ ಜೀವನವನ್ನು ಉದಾಹರಣೆಯಾಗಿ ಉಲ್ಲೇಖಿಸಿದರು. ಮಾತೆ ಶಾರದಾದೇವಿಯವರು ಸಹನೆ, ಕರುಣೆ, ತ್ಯಾಗ ಮತ್ತು ಆಧ್ಯಾತ್ಮಿಕತೆಯ ಮೂಲಕ ಸ್ತ್ರೀಕುಲಕ್ಕೆ ಆದರ್ಶವಾದ ವ್ಯಕ್ತಿತ್ವವಾಗಿ ಹೊರಹೊಮ್ಮಿದ್ದಾರೆ ಎಂದು ಅವರು ಹೇಳಿದರು. ಸ್ತ್ರೀ ತನ್ನ ಸಂಸ್ಕಾರ, ಪ್ರೀತಿ ಮತ್ತು ಮೌಲ್ಯಗಳ ಮೂಲಕ ಒಂದು ಕುಟುಂಬವಷ್ಟೇ ಅಲ್ಲ, ಸಮಸ್ತ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುವ ಶಕ್ತಿ ಹೊಂದಿದ್ದಾಳೆ ಎಂಬುದನ್ನು ಅವರು ವಿವರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಕಳೆ : ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಮಲೇಷಿಯಾದ ಕನ್ನಡಿಗರ ಪರವಾಗಿ ಶ್ರೀ ಕಿರಣ್ ಕುಮಾರ್ ರೊಣದ ಅವರು ಪೂಜ್ಯ ಸ್ವಾಮೀಜಿಗಳು ಹಾಗೂ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಯಶಸ್ವಿಯಾಗಿ ಸಂಘಟಿಸಿದರು. ಶ್ರೀ ನೀಲೇಶ್ ಬುರ್ಜಿ ಅವರ ನೇತೃತ್ವದಲ್ಲಿ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಮಾರಂಭಕ್ಕೆ ವಿಶೇಷ ಕಳೆ ತಂದರು.
ಕೊನೆಯಲ್ಲಿ ಗಿರಿಜೇಶ್ ಹಂಚಟೆ ಅವರು ಎಲ್ಲರಿಗೂ ವಂದನಾರ್ಪಣೆ ಸಲ್ಲಿಸಿದರು. ವಿದೇಶದಲ್ಲಿರುವ ಕನ್ನಡಿಗರಲ್ಲಿ ಸಂಸ್ಕೃತಿ, ಆಹಾರ ಪರಂಪರೆ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸುವಲ್ಲಿ ಈ ಕಾರ್ಯಕ್ರಮ ಮಹತ್ವದ ಪಾತ್ರವಹಿಸಿತು.
ಈ ಕಾರ್ಯಕ್ರಮಕ್ಕೆ ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್, ಕರ್ನಾಟಕ ಮತ್ತು ಕೆ.ಎಸ್.ಆರ್ ಟೂರ್ಸ್ ಅಂಡ್ ಟ್ರಾವೆಲ್ಸ್, ಮಲೇಷಿಯಾ ಸಂಸ್ಥೆಗಳು ಸಹಕಾರ ನೀಡಿದ್ದವು.


