ಅಥಣಿಯಲ್ಲಿ ಕೇಸರಿ ಕಲರವ ; ಶಿವಾಜಿ ಮಹಾರಾಜರ ಭವ್ಯ ಮೂರ್ತಿ ಅನಾವರಣ
ಅಥಣಿ : ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅಶ್ವರೂಢ ಪುತ್ತಳಿ ಲೋಕಾರ್ಪಣೆ ಕಾರ್ಯಕ್ರಮ ಭವ್ಯವಾಗಿ ಜರುಗಿತು. ಎಲ್ಲೆಡೆಯೂ ಕೇಸರಿ ಕಲರವ ಮೂಡಿತು.
ರವಿವಾರ ಪಟ್ಟಣದ ಶಿವಾಜಿ ವೃತ್ತದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣಗೊಳಿಸಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಾತನಾಡಿದರು.
ಭಾರತ ಇಂದು ಹಿಂದುತ್ವ ರಾಷ್ಟ್ರವಾಗಲು ಛತ್ರಪತಿ ಶಿವಾಜಿ ಮಹಾರಾಜರರ ಕೊಡುಗೆ ಅಪಾರವಾಗಿದೆ. ಹಿಂದೂಗಳು ರಾಷ್ಟ್ರವನ್ನು ಕಟ್ಟಬಲ್ಲರು, ಶತ್ರುಗಳನ್ನು ಸೋಲಿಸಬಲ್ಲರು ಎಂದು ಶಿವಾಜಿ ಮಹಾರಾಜರು ತಮ್ಮ ಕ್ರಿಯೆಗಳಿಂದ ತೋರಿಸಿಕೊಟ್ಟರು.
ಅವರು ಆಧುನಿಕ ಹಿಂದೂಗಳಿಗೆ ಆತ್ಮವಿಶ್ವಾಸ ತುಂಬಿದವರು. ಅವರ ದೇಶಪ್ರೇಮ, ಧೈರ್ಯ ಮತ್ತು ಶೌರ್ಯ, ಆದರ್ಶಗಳು ನಮ್ಮೆಲ್ಲರಿಗೆ ಪ್ರೇರಣೆಯಾಗಿವೆ ಎಂದು ಹೇಳಿದರು.
ಛತ್ರಪತಿ ಶಿವಾಜಿ ಮಹಾರಾಜ ಬಾಲ್ಯದಿಂದಲೇ ತಾಯಿ ಜೀಜಾಬಾಯಿಯ ಮಾರ್ಗದರ್ಶನದಿಂದ ಧೈರ್ಯವಂತನಾಗಿ, ವೀರ ಮತ್ತು ಧೀರರ ಕಥೆಗಳನ್ನು ಕೇಳುತ್ತಿದ್ದ. ಅವುಗಳ ಪ್ರಭಾವದಿಂದ ಅಂದಿನ ರಾಜ ಮಹಾರಾಜರ ದಬ್ಬಾಳಿಕೆಯಿಂದ ತುಳಿತಕ್ಕೆ ಒಳಗಾಗಿದ್ದ ಅನೇಕ ದೀನದಲಿತರ ಉದ್ಧಾರಕ್ಕಾಗಿ ಹಿಂದೂ ಸಮಾಜವನ್ನು ಸಂಘಟಿಸಿದರು.
ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳನ್ನು ಜ್ಯೋತಿಬಾಪುಲೆಯವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜವನ್ನು ಸುಧಾರಣೆ ಮಾಡಿದರು. ಅವರ ರಕ್ತದ ಪ್ರತಿ ಕಣದಲ್ಲಿಯೂ ಭಾರತ ಮಾತೆಯ ರಕ್ಷಣೆ ಕಾಣುತ್ತಿತ್ತು. ಅವರು ಕಟ್ಟಿದ ಹಿಂದೂ ರಾಷ್ಟ್ರವನ್ನು ಒಗ್ಗಟ್ಟಿನಿಂದ ಕಾಪಾಡಿಕೊಂಡು ಹೋಗಬೇಕು. ಶಿವಾಜಿಯ ಆದರ್ಶಗಳು ಇಂದಿನ ಜನಾಂಗ ಮತ್ತು ಮುಂದಿನ ಜನಾಂಗಕ್ಕೆ ಆದರ್ಶವಾಗಬೇಕು ಎಂದು ಕರೆ ನೀಡಿದರು.
ಈ ವೇಳೆ ಶಿವಪ್ರತಿಷ್ಠಾನ ಹಿಂದುಸ್ತಾನ ಸಂಸ್ಥಾಪಕ ಸಂಭಾಜಿ ವಿನಾಯಕ್ ಬಿಡೆ ಗುರೂಜಿ, ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ, ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್, ಮಾಜಿ ಡಿಸಿಎಂ ಶಾಸಕ ಲಕ್ಷ್ಮಣ ಸವದಿ, ಬೆಂಗಳೂರಿನ ಗೋಸಾಯಿ ಮಠದ ಮರಾಠ ಜಗದ್ಗುರು ಮಂಜುನಾಥ ಭಾರತಿ ಸ್ವಾಮೀಜಿ, ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ, ಶೆಟ್ಟರ ಮಠದ ಮರುಳಸಿದ್ದ ಸ್ವಾಮೀಜಿ,
ಕವಲಗುಡ್ಡದ ಅಮರೇಶ್ವರ ಮಹಾರಾಜರು, ಕಕಮರಿಯ ಅಭಿನವ ಗುರುಲಿಂಗ ಜಂಗಮ ಸ್ವಾಮೀಜಿ, ಕೊಲ್ಲಾಪುರ ಲೋಕಸಭಾ ಸದಸ್ಯ , ಶಿವಾಜಿ ವಂಶಸ್ಥರಾದ ಶ್ರೀಮಂತ ಶಾಹು ಛತ್ರಪತಿ ಮಹಾರಾಜ, ಮಾಜಿ ಸಚಿವರಾದ ಕುಮಾರ ಬಂಗಾರಪ್ಪ, ರಮೇಶ್ ಜಾರಕಿಹೊಳಿ, ಪಿ ಜಿ ಆರ್ ಸಿಂಧಿಯ, ಜತ್ ಮತ ಕ್ಷೇತ್ರದ ಶಾಸಕ ವಿಕ್ರಂಸಿಂಹ ಸಾವಂತ,
ಮಾಜಿ ಶಾಸಕ ಮಹೇಶ ಕುಮಟಳ್ಳಿ, ಶಹಜಾನ ಡೊಂಗರಗಾಂವ, ಮಹಾಂತೇಶ ಕವಟಗಿಮಠ, ಅರವಿಂದರಾವ ದೇಶಪಾಂಡೆ, ದಿಗ್ವಿಜಯ್ ಸಿಂಗ್ ಪವಾರ ದೇಸಾಯಿ, ಬಾಹುಸಾಹೇಬ ಜಾಧವ, ವಿಕ್ರಾಂತ್ ದೇಸಾಯಿ, ರಾವಸಾಹೇಬ ದೇಸಾಯಿ, ವಿನಾಯಕ ದೇಸಾಯಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಮಾಜಿ ಸಚಿವ ಶ್ರೀಮಂತ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

