Video – ಬೆಳಗಾವಿ ಜಿಲ್ಲಾ ಆರೋಗ್ಯ ಇಲಾಖೆ ಕಚೇರಿಯಲ್ಲಿ ಸಿಬ್ಬಂದಿಗಳ ಎಣ್ಣೆ ಪಾರ್ಟಿ ; ಮರ್ಯಾದೆ ಬಿಟ್ಟವರ ಕುಣಿತ ನೋಡಿ
ಬೆಳಗಾವಿ : ನಗರದ ವ್ಯಾಕ್ಸಿನ್ ಡಿಪೋ ಬಳಿ ಇರುವ ಜಿಲ್ಲಾ ಆರೋಗ್ಯ ಇಲಾಖೆಯ ಕಚೇರಿಯಲ್ಲಿ ಇಲ್ಲಿನ ಸಿಬ್ಬಂದಿಗಳು ಗಾಂಧಿ ಜಯಂತಿಯ ದಿನದಂದು ಗುಂಡಿನ ಪಾರ್ಟಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದರೂ ಜಿಲ್ಲಾ ಆರೋಗ್ಯಾಧಿಕಾರಿ ಕ್ರಮ ಕೈಗೊಳ್ಳದೆ ಇರುವುದು ನಾನಾ ಅನುಮಾನಕ್ಕೆ ಕಾರಣವಾಗಿದೆ.
ಗಾಂಧಿ ಜಯಂತಿಯ ದಿನದಂದು ಜಿಲ್ಲಾಡಳಿತ ಮದ್ಯ, ಮಾಂಸ ಮಾರಾಟ ನಿಷೇಧ ಮಾಡಿರುತ್ತದೆ. ಜಿಲ್ಲೆಯ ಜನರ ಆರೋಗ್ಯ ಕಾಪಾಡಬೇಕಿದ್ದ ಆರೋಗ್ಯ ಇಲಾಖೆಯ ಅಧಿಕಾರಿಗಳು ಗುಂಡು, ತುಂಡು ಪಾರ್ಟಿ ಮಾಡಿದ್ದಾರೆ. ಇದು ಆರೋಗ್ಯ ಇಲಾಖೆ ಅಧಿಕಾರಿ ಕಚೇರಿ ಹಿಂಭಾಗದಲ್ಲಿಯೇ ನಡೆದಿದ್ದರೂ ಪಾರ್ಟಿ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲು ಹಿಂದೆಟ್ಟು ಹಾಕುತ್ತಿದ್ದಾರೆ.
ಬೆಳಗಾವಿಯ ಟಿಳಕವಾಡಿಯಲ್ಲಿರುವ ಡಿಎಚ್ ಓ ಕಚೇರಿ ಹಿಂಭಾಗದ ಕೊಠಡಿಯಲ್ಲಿ ಡಿಎಚ್ ಓ ಕಚೇರಿಯ ಸಿಬ್ಬಂದಿಗಳು ಎಣ್ಣಿ ಪಾರ್ಟಿ ಮಾಡಿದ್ದು ಗಾಂಧಿ ಪೋಟೋ ಎದುರೇ ಕುಡಿದು, ಕುಣಿದು ಕುಪ್ಪಳಿಸಿದ್ದಾರೆ. ಕುಡಿದ ಮತ್ತಿನಲ್ಲಿ ಹಾಡು, ಡ್ಯಾನ್ಸ್ , ಹರಟೆ ಮಾಡಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಾರ್ಟಿಯಲ್ಲಿ ಡಿಎಚ್ ಓ ಕಾರು ಚಾಲಕ ಮಂಜುನಾಥ ಪಾಟೀಲ್,ಸಿಬ್ಬಂದ್ದಿ ಮಹೇಶ ಹಿರೇಮಠ ಸೇರಿ 6 ಜನ ಸಿಬ್ಬಂದಿ ಭಾಗಿಯಾಗಿದ್ದಾರೆ. ಅಕ್ಟೋಬರ್ 2 ರಂದು ಈ ಘಟನೆ ನಡೆದರೂ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಡಾ. ಮಹೇಶ ಕೋಣಿ ಇಲ್ಲಿಯವರೆ ಕ್ರಮ ಕೈಗೊಂಡಿಲ್ಲ.

