ಸವದತ್ತಿ : ಜಾತ್ರೆಯಲ್ಲಿ ಪ್ರಸಾದ ಸೇವಿಸಿ 51 ಜನ ಅಸ್ವಸ್ಥ,ಆಸ್ಪತ್ರೆಗೆ ದಾಖಲು
ಸವದತ್ತಿ : ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಬೀರೇಶ್ವರ ಹಾಗೂ ಕರೆಮ್ಮ ಜಾತ್ರೆಯಲ್ಲಿ ಪ್ರಸಾದ ಸೇವಿಸಿದ 51ಕ್ಕೂ ಅಧಿಕ ಭಕ್ತಾದಿಗಳ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳವಾರ ನಡೆದಿದೆ.
ಪ್ರಸಾದ ಸೇವಿಸಿದ 2 ಗಂಟೆಯ ನಂತರ ವಾಂತಿ-ಭೇದಿ ಮತ್ತು ಸುಸ್ತಿನಿಂದ ಅಸ್ವಸ್ಥಗೊಂಡ ಸಾರ್ವಜನಿಕರು ತಾಲೂಕಿನ ಸಾರ್ವಜನಿಕ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾವದೇ ಪ್ರಾಣಾಪಾಯವಿಲ್ಲ.
ತಾಲೂಕಾ ಆರೋಗ್ಯಧಿಕಾರಿ ಶ್ರೀಪಾದ್ ಸಬನೀಸ ಪ್ರತಿಕ್ರಿಯಿಸಿ, ಜಾತ್ರೆಯ ಅನ್ನಪ್ರಸಾದದಲ್ಲಿ ಸಂಶಯಾಸ್ಪದ ಕಲುಷಿತ ಆಹಾರ ಸೇವನೆಯಿಂದ ಮತ್ತು ಸೋಮವಾರ ದಿನ ಗ್ರಾಮದ ಎಲ್ಲ ಮನೆಗಳಲ್ಲಿ ಮಾವಿನ ಶಿಖರಣೆ ಹಾಗೂ ಹೋಳಿಗೆ ಸೇವನೆಯಿಂದ ಗ್ರಾಮದ ಕೆಲವೊಂದು ಓಣಿಗಳಲ್ಲಿ ಸಾರ್ವಜನಿಕರ ಆರೋಗ್ಯದಲ್ಲಿ ಏರುಪೇರಾಗಿ ವಾಂತಿಬೇದಿ ಪ್ರಕರಣಗಳು ಕಂಡುಬಂದಿವೆ.
ಪ್ರಕರಣ ಕಂಡುಬಂದ ರೋಗಿಗಳಿಗೆ ಸ್ಥಳೀಯವಾಗಿ ಕ್ಲಿನಿಕ್ ಪ್ರಾರಂಭಿಸಿ ಔಷಧೋಪಚಾರ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ರೋಗಿಗಳನ್ನು ಸ್ಥಳಾಂತರಿಸಲಾಗಿದೆ. ಸದರಿ ಗ್ರಾಮದಲ್ಲಿ ದಿನದ 24 ಗಂಟೆಗಳವರೆಗೆ ವೈದ್ಯಕೀಯ ಚಿಕಿತ್ಸೆಯನ್ನು ಮುಂದುವರೆಸಲಾಗುವದು. ಹಾಗೂ ಪ್ರಕರಣ ರೋಗಿಗಳು ಹೆಚ್ಚಾಗದಂತೆ ತಡೆಗಟ್ಟಲು ಕ್ರಮ ಜರುಗಿಸಲಾಗಿದೆ.
ಸ್ಥಳೀಯವಾಗಿ ಚಿಕಿತ್ಸೆ ನೀಡಿದ ಎಲ್ಲ ರೋಗಿಗಳು ಚೇತರಿಕೆಗೊಂಡಿದ್ದು ಯಾವದೇ ಅಪಾಯವಿಲ್ಲ ಎಂದರು.
ಪ್ರಾಥಮಿಕ ಚಿಕತ್ಸಾ ಕೇಂದ್ರದಲ್ಲಿ 32 ಜನ, ತಾಲೂಕಾ ಸ್ಥಾರ್ವಜನಿಕ ಆಸ್ಪತ್ರೆಯಲ್ಲಿ 14 ಜನ , ಖಾಸಗಿ ನಾವದಗಿ ಆಸ್ಪತ್ರೆಯಲ್ಲಿ 3 ಜನ, ಜಿಲ್ಲಾ ಆಸ್ಪತ್ರೆಯಲ್ಲಿ ಇಬ್ಬರು ಸೇರಿ ಒಟ್ಟು 51 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

