ಬೆಳಗಾವಿ : ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸಹ ಮಾಲಿಕತ್ವದ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದ ಹೊರ ವಲಯದಲ್ಲಿರುವ ಪ್ರಿಯಾ ಎಕ್ಸ್‌ಪೋರ್ಟ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟಕ್ಕೆ ಕಾರ್ಖಾನೆ ಗೋಡೆ ಕುಸಿದಿದೆ. ಸ್ಪೋಟದ ರಭಸಕ್ಕೆ ಶೋಭಾ ತೇಲಿ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಫಲಕಾರಿ ಆಗದೆ ಸಾವಣಪ್ಪಿದ್ದಾರೆ.
ಇನ್ನಿಬ್ಬರಿಗೆ ಮಿರಜ್ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಿಯಾ ಎಕ್ಸ್‌ಪೋರ್ಟ್ ಲಕ್ಷ್ಮಣ ಸವದಿ ಮತ್ತು ಸಾಂಗಲಿ ಉದ್ಯಮಿಯೊಬ್ಬರ ಸಹಭಾಗಿತ್ವದ ಮೆಕ್ಕೆಜೋಳ ಪಾಲಿಷ್ ಮಾಡಿ ಎಕ್ಸ್‌ಪೋರ್ಟ್ ಮಾಡುವ ಕಾರ್ಖಾನೆಯಾಗಿದ್ದು, ಹೈ ಪ್ರೆಶರ್​ನಿಂದ ಬಾಯ್ಲರ್ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.