ಬೆಳಗಾವಿಯಲ್ಲಿ ಮುಂದುವರಿದ ಮಳೆಯ ಅಬ್ಬರ – Video
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಧಾರಾಕಾರವಾಗಿ ಸುರಿದ ಭಾರಿ ಮಳೆಗೆ ಮನೆಗಳಿಗೆ ನೀರು ನುಗ್ಗಿದ್ದು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವ ಹಿನ್ನಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ತಾಲೂಕಿನ ಮಜಗಾಂವ ಗ್ರಾಮದಲ್ಲಿನ ಮನೆಗಳಿಗೆ ನೀರು ನುಗ್ಗಿದ್ದು ಬೆಳಗಾವಿಯ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ್ ಪ್ರತಿನಿಧಿಸುವ ಕ್ಷೇತ್ರದಲ್ಲಿ ಜನರು ಹೈರಾಣಾಗಿದ್ದಾರೆ. ಜಿಲ್ಲಾಧಿಕಾರಿ, ಶಾಸಕ ಅಭಯ ಪಾಟೀಲ ಹಾಗೂ ಮಹಾನಗರ ಪಾಲಿಕೆ ವಿರುದ್ಧ ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದರು.
ಕಳೆದ ನಾಲ್ಕು ವರ್ಷಗಳಿಂದ ಚರಂಡಿ ಸರಿಪಡಿಸಿಲ್ಲ.ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದಕ್ಕೆ ಮಳೆಯ ನೀರು ಮನೆಯೊಳಗೆ ನುಗ್ಗುತ್ತಿದೆ. ಮನೆಯ ಅಡುಗೆ ಕೋಣೆಗೆ ನೀರು ಬಂದಿದ್ದರಿಂದ ಮನೆಯಲ್ಲಿರುವ ದಿನಬಳಕೆಯ ವಸ್ತುಗಳು ನೀರಿನಲ್ಲಿ ನೆನೆದಿವೆ.ಹೀಗಾಗಿ ನಮಗೆ ಸೂಕ್ತ ಚರಂಡಿ ವ್ಯವಸ್ಥೆ ಮಾಡಿಕೊಡಬೇಕೆಂದು ಜನರು ಆಗ್ರಹಿಸಿದ್ದಾರೆ.
ಮಳೆ ನೀರಿಗೆ ತೇಲಿಹೋದ ಟೊಮೆಟೊ
ಬೆಳಗಾವಿಯಲ್ಲಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಖಾಸ್ ಬಾಗ್ ಮಾರುಕಟ್ಟೆಯಲ್ಲಿ ಮಳೆ ನೀರಿನ ರಭಸಕ್ಕೆ ಮಾರಾಟಗಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಅಪಾರ ಪ್ರಮಾಣದಲ್ಲಿ ಟೊಮ್ಯಾಟೊ ನೀರಿನಲ್ಲಿ ಕೊಚ್ಚಿ ಹೋದವು. ಇನ್ನೂ ವ್ಯಾಪ್ಯಾರಿಗಳು ತಮ್ಮ ತರಕಾರಿ ರಕ್ಷಿಸಿಕೊಳ್ಳಲು ಹರಸಾಹಸಪಟ್ಟರು.


