ಬೆಳಗಾವಿ : ಜನಸ್ನೇಹಿ ಪೊಲೀಸ್ ಆಡಳಿತ, ದಕ್ಷ ಕಾರ್ಯವೈಖರಿ, ಕರ್ತವ್ಯನಿಷ್ಠೆ ಹಾಗೂ ಅಪರಾಧ ಪ್ರಕರಣಗಳ ತನಿಖೆಯಲ್ಲಿ ತೋರಿದ ವಿಶೇಷ ಆಸಕ್ತಿಯ ಮೂಲಕ ಸಾರ್ವಜನಿಕರ ಪ್ರೀತಿ ಮತ್ತು ವಿಶ್ವಾಸಕ್ಕೆ ಪಾತ್ರರಾಗಿರುವ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಬಿ.ಆರ್. ಗಡ್ಡೇಕರ್ ಅವರು ಪ್ರತಿಷ್ಠಿತ ಕೇಂದ್ರ ಗೃಹ ಸಚಿವರ ದಕ್ಷತಾ ಪದಕಕ್ಕೆ ಭಾಜನರಾಗಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ತಮ್ಮದೇ ಆದ ಕಾರ್ಯಶೈಲಿಯಿಂದ ಗುರುತಿಸಿಕೊಂಡಿರುವ ಬಿ.ಆರ್. ಗಡ್ಡೇಕರ್ ಅವರು, ಸಂಕೀರ್ಣ ಹಾಗೂ ಗಂಭೀರ ಅಪರಾಧ ಪ್ರಕರಣಗಳ ತನಿಖೆಯಲ್ಲಿ ತೋರಿದ ವೃತ್ತಿಪರತೆ ಮತ್ತು ಸಾಕ್ಷ್ಯಾಧಾರಿತ ತನಿಖಾ ವಿಧಾನಕ್ಕೆ ಈ ಗೌರವ ಸಂದಿದೆ. ವಿಶೇಷವಾಗಿ ಕೋಟ್ಯಂತರ ರೂಪಾಯಿ ಠೇವಣಿ ಸಂಗ್ರಹಿಸಿ ಠೇವಣಿದಾರರಿಗೆ ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯಲ್ಲಿ ಅವರು ನಿರ್ವಹಿಸಿದ ಪಾತ್ರ ಪ್ರಮುಖವಾಗಿತ್ತು.
ಅದೇ ರೀತಿ, ಬೆಳಗಾವಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ಲಕ್ಷ್ಮಣ ದಡ್ಡಿ ಗ್ಯಾಂಗ್ನ ಅಪರಾಧ ಕೃತ್ಯಗಳನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿ, ತನಿಖೆಯನ್ನು ಸಮರ್ಥವಾಗಿ ನಡೆಸುವಲ್ಲಿ ಗಡ್ಡೇಕರ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ಪ್ರಕರಣದ ವಿಚಾರಣೆ ವೇಳೆ ಆರೋಪಿಗಳ ವಿರುದ್ಧದ ಸಾಕ್ಷ್ಯಾಧಾರಗಳು ಪರಿಣಾಮಕಾರಿಯಾಗಿ ಮಂಡನೆಯಾಗಿದ್ದು, ಆರೋಪಿಗಳಿಗೆ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ ವಿಧಿಸುವಲ್ಲಿ ತನಿಖೆಯ ಮಹತ್ವದ ಪಾತ್ರವೂ ಗುರುತಿಸಲ್ಪಟ್ಟಿದೆ.
ಕೇವಲ ಅಪರಾಧ ಪ್ರಕರಣಗಳ ಪತ್ತೆ ಮತ್ತು ಆರೋಪಿಗಳ ಬಂಧನಕ್ಕೆ ಸೀಮಿತವಾಗದೆ, ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದು, ಠಾಣೆಗೆ ಬರುವ ಜನರೊಂದಿಗೆ ಸೌಜನ್ಯದಿಂದ ವರ್ತಿಸುವುದು ಹಾಗೂ ಜನಸಾಮಾನ್ಯರಲ್ಲಿ ಪೊಲೀಸರ ಬಗ್ಗೆ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಅವರು ಕೈಗೊಂಡಿರುವ ಕಾರ್ಯಗಳು ಮೆಚ್ಚುಗೆಗೆ ಪಾತ್ರವಾಗಿವೆ.
ಪೊಲೀಸ್ ಇಲಾಖೆಯ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವುದರ ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮತ್ತು ಅಪರಾಧ ನಿಯಂತ್ರಣಕ್ಕೆ ಆದ್ಯತೆ ನೀಡುವಲ್ಲಿ ಅವರು ತೋರಿದ ಬದ್ಧತೆ ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.
ದಕ್ಷ ತನಿಖೆ, ಕರ್ತವ್ಯಪರತೆ ಮತ್ತು ಜನಸ್ನೇಹಿ ಪೊಲೀಸ್ ಸೇವೆಗೆ ಕೇಂದ್ರ ಗೃಹ ಸಚಿವರ ದಕ್ಷತಾ ಪದಕ ಲಭಿಸಿರುವುದು ಬಿ.ಆರ್. ಗಡ್ಡೇಕರ್ ಅವರ ವೃತ್ತಿಜೀವನದ ಮಹತ್ವದ ಸಾಧನೆಯಾಗಿದೆ. ಈ ಗೌರವದಿಂದ ಬೆಳಗಾವಿ ನಗರ ಪೊಲೀಸ್ ಇಲಾಖೆಯ ಕೀರ್ತಿ ಮತ್ತಷ್ಟು ಹೆಚ್ಚಿದ್ದು, ಪೊಲೀಸ್ ವಲಯದಲ್ಲಿ ಸಂತಸ ಮತ್ತು ಹೆಮ್ಮೆಯ ವಾತಾವರಣ ನಿರ್ಮಾಣವಾಗಿದೆ.
ಸಿಪಿಐ ಬಿ.ಆರ್. ಗಡ್ಡೇಕರ್ ಅವರಿಗೆ ಇತ್ತೀಚೆಗಷ್ಟೇ ರಾಷ್ಟ್ರಪತಿ ಪದಕ್ಕೆ ಭಾಜನರಾಗಿದ್ದರು. ಈಗ ಇವರ ಸಾಧನೆಗೆ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕ ವಲಯದಿಂದ ಅಭಿನಂದನೆಗಳು ವ್ಯಕ್ತವಾಗುತ್ತಿವೆ.




