ಬೆಳಗಾವಿ : ಕಬ್ಬು ಬೆಳೆಗಾರರ ಸಮಸ್ಯೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಆಕ್ರೋಶದ ಕಟ್ಟೆ ಒಡೆದಿದ್ದು, ಶನಿವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ.

ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ ಸೂಚಿಸುವ ಉದ್ದೇಶದಿಂದ ನಾಳೆ ಕರ್ನಾಟಕದ ಪ್ರತಿಯೊಂದು ಹಳ್ಳಿ, ಪಟ್ಟಣ ಹಾಗೂ ನಗರಗಳಲ್ಲಿ ಸ್ವಯಂಪ್ರೇರಿತವಾಗಿ ರಾಜ್ಯಾದ್ಯಂತ ಕರ್ನಾಟಕ ಬಂದ್ ಆಚರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಕರೆ ನೀಡಿದ್ದಾರೆ.

ಶುಕ್ರವಾರ ಸಂಜೆ ಗುರ್ಲಾಪೂರ ಕ್ರಾಸ್‌ನಲ್ಲಿ ನಡೆಯುತ್ತಿರುವ ರೈತರ ಹೋರಾಟದ ವೇದಿಕೆಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲಾಧಿಕಾರಿಗಳು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023ರ ಕಲಂ 163ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಜಿಲ್ಲೆಯ ವ್ಯಾಪ್ತಿಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ತಡೆ, ವಾಹನ ಸಂಚಾರಕ್ಕೆ ಅಡಚಣೆ ಹಾಗೂ ಟೋಲ್ ಪ್ಲಾಜಾಗಳ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವ ಚಟುವಟಿಕೆಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ರೈತರು ಶಾಂತಿಯುತವಾಗಿ ತಮ್ಮ ಪ್ರತಿಭಟನೆಯನ್ನು ಮುಂದುವರಿಸಬೇಕು ಎಂದರು.

ನಾಳೆ ರಾಜ್ಯದ ರೈತರು ಸ್ವಯಂಪ್ರೇರಿತವಾಗಿ ಬಂದ್‌ಗೆ ಬೆಂಬಲ ಸೂಚಿಸಬೇಕು. ಚಿತ್ರರಂಗದ ನಟ-ನಟಿಯರು ಕೂಡ ರೈತರ ಹೋರಾಟದಲ್ಲಿ ಭಾಗವಹಿಸಿ ಅನ್ನದಾತರ ನ್ಯಾಯಯುತ ಹೋರಾಟಕ್ಕೆ ಬೆಂಬಲ ನೀಡಬೇಕು. ಒಂದು ವೇಳೆ ಚಿತ್ರರಂಗದವರು ರೈತರ ಹೋರಾಟಕ್ಕೆ ಬೆಂಬಲ ಸೂಚಿಸದಿದ್ದರೆ, ರೈತರು ಯಾವುದೇ ಕಾರಣಕ್ಕೂ ಚಲನಚಿತ್ರಗಳನ್ನು ವೀಕ್ಷಿಸಲು ಚಿತ್ರಮಂದಿರಗಳಿಗೆ ಹೋಗಬಾರದು ಎಂದು ಕರೆ ನೀಡಿದರು.

ಅದೇ ರೀತಿ ರೈತರು ಹಾಲು, ತರಕಾರಿ ಸೇರಿದಂತೆ ದಿನನಿತ್ಯ ಬಳಕೆಯ ವಸ್ತುಗಳನ್ನು ಮಾರಾಟ ಮಾಡದೆ ಬಂದ್‌ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ರೈತರ ಸಮಸ್ಯೆಗಳಿಗೆ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರು ಸೂಕ್ತ ಪರಿಹಾರ ನೀಡುವವರೆಗೂ ಹೋರಾಟವನ್ನು ಮುಂದುವರಿಸುವ ಸಂಕಲ್ಪವನ್ನು ಅವರು ವ್ಯಕ್ತಪಡಿಸಿದರು.

***************

ಹೆದ್ದಾರಿಗೆ ಬಂದ್ರೆ ಹುಷಾರ್ : ಹೈವೇ ತಡೆಗೆ ಮುಂದಾದ ರೈತರಿಗೆ ಶಾಕ್

ಬೆಳಗಾವಿ : ಕಬ್ಬಿನ ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿರುವ ಬೆನ್ನಲ್ಲೇ, ನಾಳೆ ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ ನೀಡಿರುವ ರೈತ ಸಂಘಟನೆಗಳಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಜಿಲ್ಲಾಧಿಕಾರಿಗಳಿಗೆ ಪತ್ರ ಬಂದ ಹಿನ್ನೆಲೆಯಲ್ಲಿ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಬಿಎನ್‌ಎಸ್‌ಎಸ್-2023ರ ಕಲಂ 163ರ ಅಡಿಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ನಿರ್ಬಂಧದ ಆದೇಶ ಹೊರಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ-48 ಸೇರಿದಂತೆ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಯಾವುದೇ ವ್ಯಕ್ತಿ, ಸಂಘಟನೆ ಅಥವಾ ಗುಂಪು ಪ್ರತಿಭಟನೆ ನಡೆಸುವಂತಿಲ್ಲ. ಯಾವುದೇ ಕಾರಣಕ್ಕೂ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಬಾರದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಜಿಲ್ಲೆಯಲ್ಲಿರುವ ಮೂರು ಟೋಲ್ ಪ್ಲಾಜಾಗಳಲ್ಲಿ ಪ್ರತಿಭಟನೆ ನಡೆಸುವುದು ಹಾಗೂ ಅವುಗಳ ಕಾರ್ಯಾಚರಣೆಗೆ ಅಡ್ಡಿಪಡಿಸುವುದನ್ನು ನಿಷೇಧಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಟ್ರ್ಯಾಕ್ಟರ್ ಸೇರಿದಂತೆ ಯಾವುದೇ ವಾಹನಗಳನ್ನು ಅಡ್ಡಗಟ್ಟಿ ಸಂಚಾರಕ್ಕೆ ತಡೆಯೊಡ್ಡುವಂತಿಲ್ಲ. ಸಾರ್ವಜನಿಕ ಹಾಗೂ ಸರ್ಕಾರಿ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಬಾರದು ಎಂದು ಎಚ್ಚರಿಕೆ ನೀಡಿದೆ.