ಬೆಳಗಾವಿ : ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ ಕಚೇರಿಯಲ್ಲಿ ಸಾಮಗ್ರಿಗಳ ಖರೀದಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಬಿಲ್ ಸೃಷ್ಟಿಸಿ ಭ್ರಷ್ಟಾಚಾರ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ.
ಕಚೇರಿ ಬಳಕೆಗಾಗಿ ಜಿಲ್ಲಾ ಮಟ್ಟದ ಅನುಮೋದನೆ ಪಡೆದು ಎರಡು ಕಂಪ್ಯೂಟರ್, ಮೂರು ಪ್ರಿಂಟರ್, ಎರಡು ಟೇಬಲ್, ಕುರ್ಚಿ ಮತ್ತು ಆರು ಅಲ್ಮೇರಾ ಖರೀದಿಸಲಾಗಿದೆ ಎಂದು
2025-26ನೇ ಆರ್ಥಿಕ ವರ್ಷದ ಕೊನೆಯಲ್ಲಿ ಲಕ್ಷಾಂತರ ರೂ. ನಕಲಿ ಬಿಲ್ ಸೃಷ್ಟಿ ಭ್ರಷ್ಟಾಚಾರ ನಡೆಸಿರುವ ಆರೋಪ ಕೇಳಿಬಂದಿದೆ.
ಈ ಹಿಂದೆ ಇದ್ದ ಸಿಡಿಪಿಒ ಎಚ್. ಹೊಳೆಪ್ಪ ಎಂಬುವವರು ನಕಲಿ ಬಿಲ್ ಸೃಷ್ಟಿಸಿ ಸಾಮಗ್ರಿ ಪೂರೈಸುವ ಗುತ್ತಿಗೆದಾರರಿಗೆ ಅಕ್ರಮವಾಗಿ ಹಣ ಪಾವತಿಸಿದ್ದಾರೆ. ಆದರೆ, ಇಲ್ಲಿಯವರೆಗೂ ಕಚೇರಿಯಲ್ಲಿ ಯಾವುದೇ ವಸ್ತುಗಳು ಕಂಡುಬಂದಿಲ್ಲ. ಸ್ಥಳದಲ್ಲಿ ಪರಿಶೀಲಿಸಿದಾಗ ಖರೀದಿಸಿದ ಸಾಮಗ್ರಿಗಳು ಇಲ್ಲದಿರುವುದು ದೃಢಪಟ್ಟಿದೆ.
ಕರ್ನಾಟಕ ಹಣಕಾಸು ಸಂಹಿತೆ (KFC) ನಿಯಮ 160 ಮತ್ತು 161ರ ಪ್ರಕಾರ, ಯಾವುದೇ ಸಾಮಗ್ರಿ ಖರೀದಿಸಿದಾಗ ಮೊದಲು ಸಾಮಗ್ರಿ ಕಚೇರಿಗೆ ಬರಬೇಕು. ಸ್ಟಾಕ್ ರಿಜಿಸ್ಟರ್ನಲ್ಲಿ ನಮೂದು ಮಾಡಿ, ಪರಿಶೀಲನಾ ಸಮಿತಿಯಿಂದ ದೃಢೀಕರಿಸಿದ ನಂತರವೇ ಹಣ ಪಾವತಿಸಬೇಕು. ಇಲ್ಲಿ ನಿಯಮವನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ. ವಸ್ತು ಬಾರದೆಯೇ ಹಣ ಪಾವತಿಸಿರುವುದು ಮೇಲ್ನೋಟಕ್ಕೆ ಕರ್ನಾಟಕ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಅಡಿ ಶಿಕ್ಷಾರ್ಹ ಅಪರಾಧವಾಗಿದೆ. ಈ ಅವ್ಯವಹಾರದಲ್ಲಿ ಸುಮಾರು ಐದು ಲಕ್ಷ ರೂಪಾಯಿ ಸರ್ಕಾರಕ್ಕೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಇದು ಮೊದಲ ಪ್ರಕರಣವಲ್ಲ. ಈ ಹಿಂದೆ ಲೋಕಾಯುಕ್ತ ಅಧಿಕಾರಿಗಳು ಕಚೇರಿಗೆ ಭೇಟಿ ನೀಡಿದಾಗ ಹಲವು ಲೋಪದೋಷಗಳು ಬೆಳಕಿಗೆ ಬಂದಿದ್ದವು. ಕಚೇರಿಗೆ ನಾಮಫಲಕ ಇಲ್ಲ, ಸಾರ್ವಜನಿಕರು ಬಂದು ಕೂರಲು ಜಾಗವಿಲ್ಲ, ಕುಡಿಯಲು ನೀರಿಲ್ಲ, ಸಿಬ್ಬಂದಿಗೆ ಶೌಚಾಲಯ ವ್ಯವಸ್ಥೆಯೂ ಇಲ್ಲ ಎಂದು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಿಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿತ್ತು.
ಈ ಅಧಿಕಾರಿ ಈಗಾಗಲೇ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ವರ್ಗಾವಣೆ ಮತ್ತು ಅಮಾನತು ಶಿಕ್ಷೆಗೆ ಒಳಗಾಗಿದ್ದಾರೆ. ಆದರೂ ಹಣಕಾಸಿನ ಅಕ್ರಮ ಮುಂದುವರಿದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕೂಡಲೇ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಿ, ಸರ್ಕಾರದ ಹಣವನ್ನು ವಸೂಲಿ ಮಾಡಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
********
ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ 3 ತಿಂಗಳಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಜಿಲ್ಲಾ ಮಟ್ಟದ ಅನುಮೋದನೆ ಪಡೆದು ಎರಡು ಕಂಪ್ಯೂಟರ್, ಮೂರು ಪ್ರಿಂಟರ್, ಎರಡು ಟೇಬಲ್, ಕುರ್ಚಿ ಮತ್ತು ಆರು ಅಲ್ಮೇರಾ ಖರೀದಿಸಲಾಗಿದೆ ಎಂದು ಹಣ ಪಾವತಿಸಿದ್ದಾರೆ. ಆದರೆ ಕಚೇರಿಯಲ್ಲಿ ಯಾವುದೇ ಸಾಮಗ್ರಿಗಳು ಇರುವುದಿಲ್ಲ. ಈ ಕುರಿತು ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ.
ಕೆ.ವಿ. ರಾಮಮೂರ್ತಿ,
ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಹುಕ್ಕೇರಿ




