ಕತ್ತಿಯಿಂದ ಕೇಕ್ ಕಟ್ ; ಬಿಲ್ಡಪ್ ಕೊಟ್ಟವರನ್ನು ಕಂಬಿ ಹಿಂದೆ ಕಳುಹಿಸಿದ ಪೊಲೀಸ್..! Video

ಬೆಳಗಾವು : ಜನ್ಮದಿನ ಆಚರಣೆ ವೇಳೆ ಕತ್ತಿಯಿಂದ ಕೇಕ್ ಕತ್ತರಿಸಿ ರೀಲ್ಸ್ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದ ಪ್ರಕರಣದಲ್ಲಿ ಕಿತ್ತೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಗಳವಾರ ರಾತ್ರಿ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದ ಹೊರ ವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ-48ರ ಪಕ್ಕದಲ್ಲಿನ ಪೆಟ್ರೋಲ್ ಪಂಪ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಬರ್ತಡೇ ಆಚರಿಸಿಕೊಳ್ಳಲಾಗಿತ್ತು.
ಬರ್ತಡೇ ಆಚರಿಸಿಕೊಳ್ಳುತ್ತಿದ್ದ ಯರಗಟ್ಟಿ ತಾಲೂಕಿನ ಕಡಬಿ ಗ್ರಾಮದ ಜೈದ್ ನೂರಅಹ್ಮದ್ ಸನದಿಯನ್ನು ತಬ್ರೇಜ್ ಹನೀಫ್ ಖಾದ್ರಿ ತನ್ನ ಯಮಹಾ ಬೈಕ್ ಮೇಲೆ ಸ್ಟೈಲಿಶ್ ಆಗಿ ಕರೆದುಕೊಂಡು ಬರುತ್ತಾನೆ. ಹೀಗೆ ಬಂದವನು ಮತ್ತೊಂದು ಬೈಕ್ ಮೇಲೆ ಇಟ್ಟಿದ್ದ ಐದು ಕೇಕ್ಗಳನ್ನು ಜೈದ್ ಸನದಿ ಖಡ್ಗದಿಂದ ಕಟ್ ಮಾಡಿ ಸಂಭ್ರಮಿಸಿದ್ದ. ಈ ದೃಶ್ಯವನ್ನು ವಿಡಿಯೋ ಮಾಡಿದ್ದ ಎಂ.ಕೆ.ಹುಬ್ಬಳ್ಳಿ ಪಟ್ಟಣದ ರೇಹಾನ್ ಮುಸ್ತಾಕ್ ಅಹ್ಮದ್ ಬಡೇಘರ, ಮಂಗಳವಾರ ರಾತ್ರಿ 12 ಗಂಟೆ ಸುಮಾರಿಗೆ ತನ್ನ ಇನ್ಸಟಾ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದ.
ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಈ ಸಂಬಂಧ ಕಿತ್ತೂರು ಠಾಣೆಯಲ್ಲಿ ಆ ಯುವಕರ ವಿರುದ್ಧ ಕಲಂ 25, 27 ಭಾರತೀಯ ಆಯುಧ ಕಾಯ್ದೆ 1959ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಬುಧವಾರ ಖಡ್ಗದಿಂದ ಕೇಕ್ ಕತ್ತರಿಸಿ ಬರ್ತಡೇ ಆಚರಿಸಿಕೊಂಡ ಜೈದ್ ಸನದಿ, ವಿಡಿಯೊ ಮಾಡಿ ಇನ್ಸಟಾದಲ್ಲಿ ಅಪ್ ಲೋಡ್ ಮಾಡಿದ್ದ ರೇಹಾನ್ ಬಡೇಘರ, ಮತ್ತೋರ್ವ ತಬ್ರೇಜ್ ಖಾದ್ರಿ ಸೇರಿ ಮೂವರನ್ನು ಬಂಧಿಸಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಕೆಲವೊಂದಿಷ್ಟು ಅಪ್ರಾಪ್ತರು ಇದ್ದಾರೆ. ಅವರ ಪಾಲಕರನ್ನು ನಾವು ವಿಚಾರಣೆಗೆ ಕರೆಯಬೇಕಾಗುತ್ತದೆ ಎಂದರು.
ಯಾವುದೇ ರೀತಿ ಹವಾ ಮಾಡಲು ಹೋಗಬಾರದು. ತಲವಾರ ಹಿಡಿದು ಮ್ಯೂಸಿಕ್ ಹಾಕುವುದು, ಚಾಲೆಂಜ್ ನೀಡುವುದು, ಗಾಡಿಯಲ್ಲಿ ಬೇರೆ ಬೇರೆ ರೀತಿ ಪೋಸ್ ಕೊಡುವುದಕ್ಕೆ ಅವಕಾಶ ಇಲ್ಲ. ಒಂದು ವೇಳೆ ಈ ರೀತಿ ಸೋಶಿಯಲ್ ಮೀಡಿಯಾದಲ್ಲಿ ಮಾಡಿದ್ದು ನಮ್ಮ ಗಮನಕ್ಕೆ ಬಂದರೆ ಜೈಲಿಗೆ ಹೋಗುವುದು ನಿಶ್ಚಿತ. ಡಿಜಿಟಲ್ ಸಾಕ್ಷ್ಯ ಇರುವುದರಿಂದ ಶಿಕ್ಷೆ ಪ್ರಕಟ ಆಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಹಾಗಾಗಿ, ತಂದೆ-ತಾಯಿ ತಮ್ಮ ಮಕ್ಕಳು ಇಂತ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ನೋಡಿಕೊಳ್ಳಿ ಎಂದು ಕೆ.ರಾಮರಾಜನ್ ಕಿವಿಮಾತು ಹೇಳಿದರು.


