ಬೆಳಗಾವಿ : ಹೊಸ ವಂಟಮೂರಿ Vantamuri ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಜನ‌ ಆರೋಪಿಗಳು ತಪ್ಪಿತಸ್ಥರು ಎಂದು ಕೋರ್ಟ್ ಆದೇಶ ನೀಡಿದ್ದು ಶಿಕ್ಷೆಯ ಪ್ರಮಾಣವನ್ನು ಇಂದು (ಬುಧವಾರ) ಪ್ರಕಟಿಸಲಿದೆ.

ಪ್ರೀತಿಸಿ ತಮ್ಮ ಮಗಳನ್ನ ಮನೆಯಿಂದ ಓಡಿಸಿಕೊಂಡು ಹೋದ ಕಾರಣಕ್ಕೆ ಯುವತಿಯ ಸಂಬಂಧಿಕರು ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಹೆಚ್ಚುವರಿ 10 ನೇ ಜಿಲ್ಲಾ ಮತ್ತು ಶಸ್ತ್ರ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.

2023 ರ ಡಿಸೆಂಬರ್ 11 ರಂದು‌ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರು ಓರ್ವ ಬಾಲಾಪರಾಧಿ ಸೇರಿ 13 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ 12 ಜನ ತಪ್ಪಿತಸ್ಥರೆಂದು ನ್ಯಾಯಾಧೀಶ ಹೆಚ್.ಎಸ್ ಮಂಜುನಾಥ ತೀರ್ಪು ಪ್ರಕಟಿಸಿದ್ದಾರೆ.

ಪ್ರಕರಣದ ತೀರ್ಪು ಕಾಯ್ದಿರಿಸಿದ ಹಿನ್ನಲೆಯಲ್ಲಿ 12 ಜನ ಆರೋಪಿಗಳನ್ನು ಪೊಲೀಸರರು ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಎಲ್ಲರನ್ನೂ ಹಿಂಡಲಗಾ ಜೈಲಿಗೆ ವಾಪಸ್ ಕರೆದೊಯ್ದುರು.