ಬಿಡಿಸಿಸಿ ಅಧ್ಯಕ್ಷ ಹುದ್ದೆ ಯಾರಿಗೆ…? ನಾನು ಆಕಾಂಕ್ಷಿ ಎಂದ ಜೊಲ್ಲೆ…!

ಬೆಳಗಾವಿ : ಮತದಾನದ ಹಕ್ಕು ಕೈಬಿಡಲಾಗಿದೆ ಎಂಬ ಆರೋರಪ ಮೇಲೆ ಕೋರ್ಟ್ ಮೆಟ್ಟಿಲೇರಿದ್ದ ಬಿಡಿಸಿಸಿ ಬ್ಯಾಂಕಿನ ನಾಲ್ಕು ನಿರ್ದೇಶಕ ಸ್ಥಾನದ ಫಲಿತಾಂಶ ಪ್ರಕಟವಾಗಿದ್ದು ರಮೇಶ್ ಕತ್ತಿ, ಅಣ್ಣಾಸಾಹೇಬ್ ಜೊಲ್ಲೆ, ನಾನಾಸಾಹೇಬ್ ಪಾಟೀಲ್ ಹಾಗೂ ಮಹಾಂತೇಶ್ ದೊಡ್ಡಗೌಡರ್ ಆಯ್ಕೆಯಾಗಿದ್ದು.
ಒಟ್ಟು 16 ಸ್ಥಾನಗಳಲ್ಲಿ 9 ಸ್ಥಾನ ಅವಿರೋಧ ಆಯ್ಕೆಯಾಗಿದ್ದವು. ಇನ್ನುಳಿದ ಏಳು ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಮೂರು ಕ್ಷೇತ್ರದ ಫಲಿತಾಂಶ ಪ್ರಕಟವಾಗಿತ್ತು. ಸಧ್ಯ ಇನ್ನುಳಿದ ನಾಲ್ಕೂ ಸ್ಥಾನದ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಬಾಲಚಂದ್ರ ಜಾರಕಿಹೊಳಿ ನೇತೃತ್ವದ ಬಣ 13 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿ ಹಿಡಿತ ಕಾಯ್ದುಕೊಂಡಿದೆ.
ಶಾಸಕ ಬಾಲಚಂದ್ರ ಜಾರಕಿಹೊಳಿ ಬಣದ ಸದಸ್ಯರೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇದೇ ನವೆಂಬರ್ 10 ಕ್ಕೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಚುನಾವಣಾ ಅಧಿಕಾರಿ ಘೋಷಣೆ ಮಾಡಿದ್ದು ಈಗ ಎಲ್ಲರ ಕಣ್ಣು ಅಧ್ಯಕ್ಷ ಸ್ಥಾನದತ್ತ ನೆಟ್ಟಿದೆ.
ಲಿಂಗಾಯತ ಬಣದವರನ್ನೇ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಎಂದು ಈಗಾಗಲೇ ಬಾಲಚಂದ್ರ ಜಾರಕಿಹೊಳಿ ಘೋಷಣೆ ಮಾಡಿದ್ದಾರೆ. ಸಧ್ಯ ಅಧ್ಯಕ್ಷ ಸ್ಥಾನಕ್ಕೆ ಅಣ್ಣಾಸಾಹೆಬ್ ಜೊಲ್ಲೆ, ಮಹಾಂತೇಶ್ ದೊಡ್ಡಗೌಡರ್ ತೀವ್ರ ಪೈಪೋಟಿ ನಡೆಸಿದ್ದು ಸಾಹುಕಾರರ ನಿರ್ಣಯವೇ ಅಂತಿಮವಾಗಲಿದೆ.
ಈ ನಡುವೆ ಕಾಗವಾಡ ಶಾಸಕ ರಾಜು ಕಾಗೆ ಅಥಣಿ ಚಿಕ್ಕೋಡಿಯಿಂದ ನಿರ್ದೇಶಕರಾಗಿ ಆಯ್ಕೆಯಾದ ಗಣೇಶ್ ಹುಕ್ಕೇರಿಗೆ ಅಧ್ಯಕ್ಷ ಸ್ಥಾನ ನೀಡುವ ಕುರಿತು ಜಾರಕಿಹೊಳಿ ಬಣದಲ್ಲಿ ಚರ್ಚೆ ನಡೆದಿದ್ದಾವೆ ಎಂಬ ಮಾತು ಕೇಳಿಬರುತ್ತಿದೆ. ಉಪಾಧ್ಯಕ್ಷ ಸ್ಥಾನಕ್ಕೆ ವಿರೂಪಾಕ್ಷ ಮಾಮನಿ ಆಯ್ಕೆಯಾದರೂ ಅಚ್ಚರಿಯಿಲ್ಲ.
ಈ ನಡುವೆ ನಾನೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಮಾಜಿ ಸಂಸದ ಅಣ್ಣಾಸಾಹೆಬ್ ಜೊಲ್ಲೆ ಹೇಳಿಕೊಂಡಿದ್ದಾರೆ. ಒಂದುವೇಳೆ ಅಧ್ಯಕ್ಷ ಸ್ಥಾನ ಸಿಗದಿದ್ದರೆ ಜೊಲ್ಲೆ ನಡೆ ಮುಂದೆ ಏನಾಗುವುದು ಎಂಬ ಕುತೂಹಲ ಇದೆ. ಒಟ್ಟಿನಲ್ಲಿ ಡಿಸಿಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಹಿನ್ನಲೆಯಲ್ಲಿ ಸಾಕಷ್ಟು ಕುತೂಹಲ ಮೂಡಿವೆ.


