
ರಾಮದುರ್ಗ : ಬಾಲಚಂದ್ರ ಜಾರಕಿಹೊಳಿ ಬೆಂಬಲಿಗರಿಗೆ ಟೈಟ್ ಸೆಕ್ಯುರಿಟಿ ; ರಂಗೇರಿದ ಡಿಸಿಸಿ ಚುನಾವಣೆ

ರಾಮದುರ್ಗ : ಡಿಸಿಸಿ ಬ್ಯಾಂಕ್ ಚುನಾವಣೆ ಗೆಲ್ಲಲು ಅಭ್ಯರ್ಥಿಗಳ ಮಧ್ಯೇ ತೀವ್ರ ಪೈಪೋಟಿ ಏರ್ಪಟ್ಟಿದ್ದು ಮತದಾನ ಹಕ್ಕು ಪಡೆಯಲು ಪಿಕೆಪಿಎಸ್ ಸದಸ್ಯರು ಬಿಗಿ ಭದ್ರತೆಯಲ್ಲಿ ಆಗಮಿಸಿದ ಘಟನೆ ಮಂಗಳವಾರ ರಾಮದುರ್ಗದಲ್ಲಿ ನಡೆದಿದೆ.
ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ರಾಮದುರ್ಗದಿಂದ ಸ್ಪರ್ಧೇ ಮಾಡಿರುವ ಹಾಲಿ ನಿರ್ದೇಶಕ ಎಸ್.ಎಸ್ ಢವಣ ಅವರನ್ನು ಬೆಂಬಲಿಸಿರುವ ಹನ್ನೊಂದು ಪಿಕೆಪಿಎಸ್ ಸದಸ್ಯರು ಭದ್ರತೆಯಲ್ಲಿ ತಾಲೂಕಿನ ಡಿಸಿಸಿ ಬ್ಯಾಂಕಿಗೆ ಆಗಮಿಸಿ ಮತದಾನ ಹಕ್ಕು ಪಡೆದುಕೊಂಡರು. ಈ ವೇಳೆ ಸ್ವತಃ ಪೊಲೀಸರು ನೀಡಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿಯಾಗಿರುವ ಎಸ್.ಎಸ್ ಢವಣ ತಮ್ಮ ಬೆಂಬಲಿತ ಪಿಕೆಪಿಎಸ್ ಸದಸ್ಯರನ್ನು ಗುಪ್ತ ಸ್ಥಳಕ್ಕೆ ರವಾನೆ ಮಾಡಿದ್ದಾರೆ. ಇನ್ನು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರ ಸಹೋದರ ಮಲ್ಲಣ್ಣ ಯಾದವಾಡ ಹಾಗೂ ಹಾಲಿ ಶಾಸಕ ಅಶೋಕ್ ಪಟ್ಟಣ ಅವರೂ ಚುನಾವಣೆ ಸ್ಪರ್ಧಿಸುವ ತಯಾರಿ ನಡೆಸಿದ್ದು ತಮ್ಮ ಬೆಂಬಲಿಗರನ್ನು ಪ್ರತ್ಯೇಕವಾಗಿ ಗೌಪ್ಯ ಸ್ಥಳದಲ್ಲಿ ಇರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸಧ್ಯ ರಾಮದುರ್ಗದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಕೊನೆ ಕ್ಷಣದಲ್ಲಿ ಯಾರೂ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬುದರ ಮೇಲೆ ಸೋಲು, ಗೆಲುವಿನ ಲೆಕ್ಕಾಚಾರ ಅಡಗಿದೆ ಎಂದು ಹೇಳಬಹುದು.